
ಪೀಣ್ಯ ದಾಸರಹಳ್ಳಿ: ಚಿತ್ರ ನಟರೊಬ್ಬರ ಹೆಸರು ಹೇಳಿಕೊಂಡು ನಿವೇಶನ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪದಡಿ ಐವರ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಕನ್ಯಾ, ನರಸಿಂಹ, ರಾಮಣ್ಣ, ಉಮಾ, ಮಂಜುಳಾ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
‘ಲಕ್ಷ್ಮಿ ಪ್ರಸಾದ್ ಫೈನಾನ್ಸ್ ಹೆಸರಿನಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿರುವ ನರಸಿಂಹ ಎಂಬಾತ ಕನ್ನಡ ಚಿತ್ರನಟರೊಬ್ಬರ ಜತೆಗೆ ತೆಗೆಸಿಕೊಂಡಿರುವ ಹಲವು ಫೋಟೋಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ನಟ ತನಗೆ ತುಂಬಾ ಆಪ್ತರಾಗಿದ್ದಾರೆ ಎಂದು ಗ್ರಾಹಕರನ್ನು ನಂಬಿಸಿ, ನಿವೇಶನ ಕೊಡಿಸುವುದಾಗಿ ಪ್ರಚಾರ ನಡೆಸಿ ಹಣ ಪಡೆದಿದ್ದಾನೆ’ ಎಂಬ ಆರೋಪವಿದೆ.
‘ಗಂಗಮ್ಮ ಎಂಬುವವರ ಬಳಿ ನಿವೇಶನ ಕೊಡಿಸುವುದಾಗಿ ₹28 ಲಕ್ಷ ಪಡೆದು ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಪೌರಕಾರ್ಮಿಕರ ಬಳಿಯೂ ನರಸಿಂಹ ಹಣ ಪಡೆದು ನಿವೇಶನ ಕೊಡದೆ ವಂಚನೆ ಮಾಡಿದ್ದಾನೆ. ಸುಕನ್ಯಾ ಹಾಗೂ ನರಸಿಂಹ ದೊಡ್ಡಬಳ್ಳಾಪುರದಲ್ಲಿ ಲೇಔಟ್ ನಿರ್ಮಾಣ ಮಾಡಲಾಗಿದೆ ಎಂದು ತೋರಿಸಿದ್ದರು. ನಂತರ, ಹಂತ ಹಂತವಾಗಿ ಹಣ ಪಡೆದು ನಿವೇಶನ ಕೊಡದೇ ಸತಾಯಿಸಿದ್ದ. ಹಣ ವಾಪಸ್ ಕೊಡು ಎಂದು ಕೇಳಿದರೆ, ಹಣ ಮರಳಿಸದೇ ನರಸಿಂಹ ಧಮ್ಕಿ ಹಾಕಿದ್ದ’ ಎಂದು ಹಣ ನೀಡಿದವರು ದೂರಿದ್ದಾರೆ.
ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆ
ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಯಿತು. ಬಳಿಕ ಸೋಲದೇವನಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡರು. ‘ನರಸಿಂಹ ಎಂಬಾತ ಮನೆಯ ಎದುರಲ್ಲಿ ವಾಸವಿದ್ದ. ಲೇಔಟ್ ನಿರ್ಮಾಣ ಮಾಡಿದ್ದೇವೆ. ಕಡಿಮೆ ಬೆಲೆಗೆ ನಿವೇಶನ ಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ಈಗ ಮೋಸ ಮಾಡಿದ್ದಾನೆ. ನಟನ ಜನ್ಮದಿನಾಚರಣೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ. ನನ್ನಂತೆಯೇ ಇನ್ನೂ ಹಲವರಿಗೆ ನಂಬಿಸಿ ಮೋಸ ಮಾಡಿದ್ದಾನೆ. ಹಣ ಕೇಳಿದರೆ ಬೆದರಿಕೆ ಹಾಕಿದ್ದಾನೆ’ ಎಂದು ಮಂಗಳಾ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.