ADVERTISEMENT

ಬ್ಯಾಟರಾಯನಪುರ | ಸರ್ಕಾರಿ ಜಾಗ ಒತ್ತುವರಿ: ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 16:15 IST
Last Updated 10 ಸೆಪ್ಟೆಂಬರ್ 2025, 16:15 IST
ಯಲಹಂಕ ತಾಲ್ಲೂಕು ಕಚೇರಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು  
ಯಲಹಂಕ ತಾಲ್ಲೂಕು ಕಚೇರಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು     

ಬೆಂಗಳೂರು: ನಗರದ ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ಲೇಔಟ್‌ನ ಸರ್ವೆ ನಂ. 18, 22, 99, 100ರಲ್ಲಿನ ಸರ್ಕಾರಿ ಜಾಗವನ್ನು ಭೂಮಾಫಿಯಾ ಒತ್ತುವರಿ ಮಾಡಿಕೊಂಡಿದೆ. ಈ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಯಲಹಂಕ ಮಿನಿ ವಿಧಾನಸೌಧದ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಮಾತನಾಡಿ, ‘ಕಂದಾಯ ಸಚಿವರ ಸ್ವಕ್ಷೇತ್ರದಲ್ಲೇ ಈ ರೀತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗಿರುವುದು ವಿಷಾದಕರ ಸಂಗತಿ. ಒತ್ತುವರಿ ವಿರುದ್ದ ದೂರು ನೀಡಿದ್ದರೂ ಸಹ ಅಧಿಕಾರಿಗಳು ತೆರವು ಮಾಡದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ’ ಎಂದು ಆರೋಪಿಸಿದರು.

ಮಾತಿನ ಚಕಮಕಿ: ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಹೇಳಿ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಮುಂದಾದರು. ಆಗ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

ಪೊಲೀಸರ ಮೂಲಕ ಹೋರಾಟ ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತರು, ಕಂದಾಯ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಘೋಷಣೆ ಕೂಗಿದರು. ಆಗ ಪೊಲೀಸರು ಯಲಹಂಕ ತಾಲ್ಲೂಕು ಕಚೇರಿಯ ಗೇಟ್ ಬಂದ್ ಮಾಡಿ, ಪ್ರತಿಭಟನಕಾರರು ಒಳ ಪ್ರವೇಶಿಸದಂತೆ ತಡೆದರು. ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಂತಗೌಡ, ನಗರ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮಾಂತರ ಮಂಡಲ  ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್.ಅನಿಲ್ ಕುಮಾರ್, ಬೇಗೂರು ಮಹೇಶ್, ಪ್ರತಾಪ್, ಕೋಗಿಲು ವಾರ್ಡ್ ಅಧ್ಯಕ್ಷ ಕೆ.ಎ. ಅನಿಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.