ADVERTISEMENT

ಮಡಿವಾಳ ಮಾರುಕಟ್ಟೆ: ವ್ಯಾಪಾರಕ್ಕೆ ಮಳಿಗೆಗಳೇ ಇಲ್ಲ; ಮಳೆ ಬಂದರೆ ಕೆಸರು

ಶೆಡ್‌ಗಳ ನಿರೀಕ್ಷೆಯಲ್ಲಿ ಸಣ್ಣ ವ್ಯಾಪಾರಿಗಳು

ಬಾಲಕೃಷ್ಣ ಪಿ.ಎಚ್‌
Published 3 ಆಗಸ್ಟ್ 2023, 0:13 IST
Last Updated 3 ಆಗಸ್ಟ್ 2023, 0:13 IST
ಗಿಜಿಗಡುತ್ತಿರುವ ಬೆಂಗಳೂರಿನ ಮಡಿವಾಳ ಮಾರುಕಟ್ಟೆ -ಪ್ರಜಾವಾಣಿ ಚಿತ್ರ/ ರಂಜು ಪಿ.
ಗಿಜಿಗಡುತ್ತಿರುವ ಬೆಂಗಳೂರಿನ ಮಡಿವಾಳ ಮಾರುಕಟ್ಟೆ -ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ರೈತರು ತಾವು ಬೆಳೆದ ಫಸಲುಗಳೊಂದಿಗೆ ನೇರವಾಗಿ ಮಾರಾಟ ಮಾಡಬಹುದಾದ ವ್ಯವಸ್ಥೆ ಇರುವ ಮಡಿವಾಳ ಮಾರುಕಟ್ಟೆಯು ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ. ಅದರಲ್ಲಿಯೇ ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ಇದೆ.

ಒಂದೂ ಕಿಲೋಮೀಟರ್‌ಗೂ ಅಧಿಕ ಉದ್ದ ಇರುವ ಈ ಮಾರುಕಟ್ಟೆಯಲ್ಲಿ ಅರ್ಧದಷ್ಟು ಪ್ರದೇಶದಲ್ಲಿ ಕೆಸರಲ್ಲೇ ಓಡಾಡಬೇಕು. ಪ್ರತಿದಿನ ಸಾವಿರಾರು ಗ್ರಾಹಕರು ಇಲ್ಲಿ  ಸೊಪ್ಪು, ತರಕಾರಿ ಸಹಿತ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ. ಮಳೆ ಬಂದರೆ ಕೊಚ್ಚೆಯಂತಾಗುವ ಇಲ್ಲಿ ನಡೆದಾಡುವುದೂ ಕಷ್ಟ. ದ್ವಿಚಕ್ರವಾಹನಗಳು ಇಲ್ಲಿ ಜಾರಿ ಬೀಳುತ್ತವೆ. ಮಾರುಕಟ್ಟೆಯ ಒಂದು ಬದಿ ಕೆಸರಿಲ್ಲದ ಕಡೆ ವಿಪರೀತ ವ್ಯಾಪಾರ ನಡೆಯುತ್ತಿದ್ದರೆ, ಇನ್ನೊಂದು ಕಡೆ ಗ್ರಾಹಕರಿಗೆ ಕಾದು  ಸುಸ್ತಾಗಿರುವ ವ್ಯಾಪಾರಿಗಳು ಏಕಕಾಲಕ್ಕೆ ಇಲ್ಲಿ ಕಾಣ ಸಿಗುತ್ತಾರೆ.

‘ಕೆಸರಿನಿಂದಾಗಿ ನಮ್ಮ ಅಂಗಡಿಗೆ ಯಾರೂ ಬರುವುದಿಲ್ಲ. ಕೆಸರಿಲ್ಲದ ಜಾಗದಲ್ಲಿ ಇರುವ ಅಂಗಡಿಗಳಿಗೆ ಹೋಗುತ್ತಾರೆ. ಬಡವರ ಕಷ್ಟವನ್ನು ಯಾರು ಕೇಳುತ್ತಾರೆ’ ಎಂದು ಮಸಾಲ ಪುಡಿ ಮಾರಾಟಗಾರ ನಟರಾಜ್‌ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೆಸರಿನಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ. ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಿದ್ದೇವೆ. 200 ಮೀಟರ್‌ನಷ್ಟಾದರೂ ಕಾಂಕ್ರಿಟ್‌ ಮಾಡಿದರೆ ಕೆಸರು ಇಲ್ಲದಂತೆ ಮಾಡಬಹುದು. ನಮ್ಮ ಬೇಡಿಕೆ ಸಲ್ಲಿಸಿದ್ದೇವೆ. ಸರಿ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಮಡಿವಾಳ ಸಂತೆ ಸಣ್ಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ಯಾರೇಜಾನ್‌ ಮಾಹಿತಿ ನೀಡಿದರು.

ನಿರ್ಮಾಣಗೊಳ್ಳದ ಅಂಗಡಿಗಳು: ಈ ಮಾರುಕಟ್ಟೆಯಲ್ಲಿ 466 ವ್ಯಾಪಾರಸ್ಥರಿದ್ದಾರೆ. ಇವರಲ್ಲಿ 88 ವ್ಯಾಪಾರಸ್ಥರಿಗಷ್ಟೇ ಮಳಿಗೆಗಳಿವೆ. ಇನ್ನೂ 378 ಅಂಗಡಿ ಮಳಿಗೆಗಳು ನಿರ್ಮಾಣಗೊಂಡಿಲ್ಲ. ಮಳೆ ಬಂದರೆ ತರಕಾರಿ ಮತ್ತು ಇತರ ವಸ್ತುಗಳನ್ನು ಇರಿಸಲು ಜಾಗವಿಲ್ಲ. ಮಳೆಯಲ್ಲೇ ವ್ಯಾಪಾರ ಮಾಡಬೇಕಾದ ಸ್ಥಿತಿ ಇದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

‘ಕೆಲವು ಅಂಗಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಉಳಿದ ಅಂಗಡಿ ಮಳಿಗೆಗಳನ್ನು ನಿರ್ಮಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಪ್ಯಾರೇಜಾನ್‌ ತಿಳಿಸಿದರು.

ನೇರ ಮಾರಾಟ: ಇಲ್ಲಿ ಬ್ರೋಕರ್‌ ವ್ಯವಸ್ಥೆ ಇಲ್ಲದ ಮಾರುಕಟ್ಟೆಯನ್ನು ಮಾಡಲು ಸಾಧ್ಯವಾಗಿದೆ. ಯಾವುದೇ ಹಳ್ಳಿಯಿಂದ ರೈತರು ನೇರವಾಗಿ ಬಂದು ಇಲ್ಲಿ ವ್ಯಾಪಾರ ಮಾಡಬಹುದು. ರೈತರು ಬಂದು ಇಲ್ಲಿನ ವ್ಯಾಪಾರಿಗಳಿಗೆ ಮಾರಾಟ ಮಾಡಿ ಹೋಗುತ್ತಿದ್ದಾರೆ. ಹಿಂದೆಲ್ಲ ರೈತರಿಂದ ಮಧ್ಯವರ್ತಿಗಳು ಖರೀದಿ ಮಾಡುತ್ತಿದ್ದರು. ಬಳಿಕ ಮಧ್ಯವರ್ತಿಗಳು ಇಲ್ಲಿನ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ಈಗ ಅವೆಲ್ಲವನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಲ್ಲಿನ ವ್ಯಾಪಾರಿಗಳು ಹೇಳುತ್ತಾರೆ.

ಎಲ್ಲ ದಿನಗಳಲ್ಲಿ ವಹಿವಾಟು ನಡೆಯುತ್ತದೆಯಾದರೂ ಭಾನುವಾರ ಮತ್ತು ಸೋಮವಾರ ಹೆಚ್ಚು ವ್ಯಾಪಾರ ಇರುತ್ತದೆ. ಈ ಕಾರಣದಿಂದ ಬೇರೆ ದಿನಗಳಲ್ಲಿ ಬೇರೆ ಬೇರೆ ಕೆಲಸಕ್ಕೆ ಹೋಗುವವರೂ ಭಾನುವಾರ ಮತ್ತು ಸೋಮವಾರ ಇಲ್ಲಿ ಸೊಪ್ಪು, ತರಕಾರಿ ಮಾರಾಟ ಮಾಡಲು ಬರುತ್ತಾರೆ. ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಿದರೆ ಮಾದರಿ ಮಾರುಕಟ್ಟೆಯನ್ನಾಗಿ ಮಾಡುವ ಅವಕಾಶ ಇಲ್ಲಿದೆ ಎಂದು ಹೇಳುತ್ತಾರೆ.

ಮಡಿವಾಳ ಮಾರುಕಟ್ಟೆಯ ಇನ್ನೊಂದು ಭಾಗದಲ್ಲಿ ಕೆಸರು ತುಂಬಿರುವುದರಿಂದ ಗ್ರಾಹಕರಿಲ್ಲದ ನೋಟ
ಕೆಸರಿಗೆ ಅಂಜಿ ಗ್ರಾಹಕರು ಬಾರದೇ ಇದ್ದಿದ್ದರಿಂದ ಕಾದು ಕಾದು ನಿದ್ದೆ ಹೋದ ಸೊಪ್ಪು ಮಾರಾಟ ಮಾಡುವ ಮಹಿಳೆ
ದೀಪಾ
ಕಾಳಿಯಮ್ಮ
ಅಲವೇಲು
ಗೋವಿಂದ
ನಟರಾಜ್
ಪ್ಯಾರೆಜಾನ್
ಮಡಿವಾಳ ಮಾರುಕಟ್ಟೆಯಲ್ಲಿ ಬಿದ್ದಿರುವ ಕಸವನ್ನು ವಿಲೇವಾರಿ ಮಾಡುತ್ತಿರುವ ಬಿಬಿಎಂಪಿ ಪೌರಕಾರ್ಮಿಕರು
ಮಡಿವಾಳ ಮಾರುಕಟ್ಟೆಯ ಹೊರಗೆ ಪಾರ್ಕಿಂಗ್‌ ಜಾಗ ಇದ್ದರೂ ಇಕ್ಕಟ್ಟಾದ ಮಾರುಕಟ್ಟೆಯ ಒಳಗೆ ದ್ವಿಚಕ್ರವಾಹನಗಳಲ್ಲಿ ಬಂದು ವ್ಯಾಪಾರ ಮಾಡುವವರೇ ಹೆಚ್ಚಿದ್ದಾರೆ

ಇಲ್ಲಿ ಸಿಕ್ಕಾಪಟ್ಟೆ ಸೊಳ್ಳೆಕಾಟ. ನೊಣ ಚಿರಳೆ ಇಲಿಗಳಿಂದಲೂ ನಮ್ಮ ತರಕಾರಿ ಹಾಳಾಗುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡಿದರೆ ಮಾತ್ರ ಸಮಸ್ಯೆ ಪರಿಹಾರವಾಗಬಹುದು.

-ದೀಪಾ ತರಕಾರಿ ವ್ಯಾಪಾರಿ.

ನಮಗೆ ಅಂಗಡಿ ಮಳಿಗೆ ಕೊಡ್ತೀವಿ ಕೊಡ್ತೀವಿ ಅಂದ್ರು. ಕೊನೆಗೆ ಕೈಕೊಟ್ಟು ಬಿಟ್ರು. ಬಿಸಿಲು ಮಳೆಯಲ್ಲೇ ನಿಂತು ವ್ಯಾಪಾರ ಮಾಡ್ತಾ ಇದ್ದೀವಿ.

-ಕಾಳಿಯಮ್ಮ 6 ದಶಕಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿರುವವರು

ಕೆಲವರಿಗೆ ಮಳಿಗೆ ಸಿಕ್ಕಿದೆ. ಇನ್ನು ಕೆಲವರು ಅವರೇ ಟಾರ್ಪಲ್ ಹಾಕಿಕೊಂಡು ಭದ್ರತೆ ಮಾಡಿಕೊಂಡಿದ್ದಾರೆ. ನಾವು ಮಳೆ ಬಂದರೆ ಪಕ್ಕದ ಮಳಿಗೆಗೆ ಒಡಬೇಕು.

-ಅಲವೇಲು ತರಕಾರಿ ವ್ಯಾಪಾರ ಮಾಡುವ ಮಹಿಳೆ

ಟೊಮೆಟೊಗೆ ವಿಪರೀತ ದರ ಇರುವುದರಿಂದ ಒಂದು ಕೆ.ಜಿ. ಒಯ್ಯವವರು ಅರ್ಧ ಕೆ.ಜಿ ಒಯ್ಯುತ್ತಿದ್ದಾರೆ. ಟೊಮೊಟೊ ಹಿಂದಿನಷ್ಟು ಖಾಲಿಯಾಗುತ್ತಿಲ್ಲ.

-ಗೋವಿಂದ ಟೊಮಟೊ ವ್ಯಾಪಾರಸ್ಥರು

ಕಾಂಕ್ರೀಟ್‌ ರಸ್ತೆಯನ್ನು ನಿರ್ಮಿಸುವ ಮೂಲಕ ಕಸರು ಇಲ್ಲದಂತೆ ಮಾಡಿ ಮಾರುಕಟ್ಟೆಯ ಎಲ್ಲ ಕಡೆ ವ್ಯಾಪಾರ ನಡೆಯುವಂತೆ ಮಾಡಬೇಕು.

-ನಟರಾಜ್‌ ಮಸಾಲೆ ಪುಡಿ ಮಾರಾಟಗಾರ

‘ಪರಿಸರ ಪೂರಕ ಮಾರುಕಟ್ಟೆಯಾಗಬೇಕು’

ನಿತ್ಯ ಬಿಬಿಎಂಪಿಯವರು ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ಬೇರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ಮಡಿವಾಳ ಮಾರುಕಟ್ಟೆ ಹೆಚ್ಚು ಸ್ವಚ್ಛವಾಗಿದೆ. ಇನ್ನಷ್ಟು ಸ್ವಚ್ಛಗೊಳ್ಳಬೇಕಾದ ಅವಶ್ಯಕತೆ ಇದೆ. ಮಾರುಕಟ್ಟೆ ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದವಿದೆ. ಎರಡೂ ತುದಿಗಳಲ್ಲಿ ಒಂದೊಂದು ಶೌಚಾಲಯವಿದೆ. ಮಧ್ಯದಲ್ಲಿ ಒಂದು ಶೌಚಾಲಯ ನಿರ್ಮಾಣಗೊಳ್ಳಬೇಕು. ಮಾರುಕಟ್ಟೆಯ ಎರಡು ಕಡೆಗಳಲ್ಲಿ ರೈತರ ಶೆಡ್‌ ನಿರ್ಮಿಸಲಾಗಿದೆ. ಒಂದರಲ್ಲಿ ತರಕಾರಿ ಇನ್ನೊಂದರಲ್ಲಿ ಸೊಪ್ಪು ಮಾರಾಟವಾಗುತ್ತಿದೆ. ಇದರ ಮಧ್ಯೆ ಇರುವ ವ್ಯಾಪಾರಸ್ಥರಿಗೂ ಮಳಿಗೆಗಳಾಗಬೇಕು. ಅಂಗಡಿಗಳ ಮಧ್ಯೆ ಕಾಂಕ್ರೀಟ್‌ ರಸ್ತೆ ನಿರ್ಮಿಸಬೇಕು. ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ ಮಧ್ಯೆ ಗಿಡಗಳನ್ನು ಹಾಕಿ ಪರಿಸರ ಪೂರಕ ಮಾರುಕಟ್ಟೆ ನಿರ್ಮಿಸಬೇಕು. ಇವೆಲ್ಲವನ್ನು ಶಾಸಕರ ಮುಂದೆ ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದೇವೆ. ಪ್ಯಾರೇಜಾನ್‌ ಮಡಿವಾಳ ಸಂತೆ ಸಣ್ಣ ವ್ಯಾಪಾರಿಗಳ ಸಂಘದ ಅಧ್ಯಕ್ಷ

‘ಮಾಂಸ ಮಾರುಕಟ್ಟೆ ಇಲ್ಲ’

ಇಲ್ಲಿ ಪ್ರತ್ಯೇಕವಾಗಿ ಮಾಂಸ ಮಾರುಕಟ್ಟೆಯಿಲ್ಲ. ಮೀನು ಮಾರಾಟ ಚಿಕನ್‌ ಅಂಗಡಿ ಈ ತರಕಾರಿ ಮಾರುಕಟ್ಟೆಯ ನಡುವೆಯೇ ಇದೆ. ಪ್ರತ್ಯೇಕ ಮಾಂಸ ಮಾರುಕಟ್ಟೆ ಮಾಡಬೇಕು ಎಂಬುದು ಇಲ್ಲಿನ ವ್ಯಾಪಾರಿಗಳ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.