ADVERTISEMENT

ನಕಲಿ ವಂಶವೃಕ್ಷ ನಂಬಿ ₹33 ಕೋಟಿ ಪರಿಹಾರ ಕೊಟ್ಟ ಮೆಟ್ರೊ ನಿಗಮ

ಇಬ್ಬರು ಆರೋಪಿಗಳ ವಿರುದ್ಧ ವಿಚಾರಣೆಗೆ ಸುಪ್ರೀಂ ಆದೇಶ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:20 IST
Last Updated 18 ಜುಲೈ 2025, 0:20 IST
<div class="paragraphs"><p>ನಮ್ಮ ಮೆಟ್ರೊ</p></div>

ನಮ್ಮ ಮೆಟ್ರೊ

   

ನವದೆಹಲಿ: ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಲ್ಲಿ ಸಹೋದರರು ಹಾಗೂ ಅವರ ಮಕ್ಕಳು
ನಕಲಿ ‘ವಂಶವೃಕ್ಷ’ ಸೃಷ್ಟಿಸಿ ಬೆಂಗಳೂರು ಮೆಟ್ರೊ ರೈಲು ನಿಗಮದಿಂದ (ಬಿಎಂಆರ್‌ಸಿಎಲ್) ₹33 ಕೋಟಿ ಭೂ ಪರಿಹಾರ ಪಡೆದಿದ್ದಾರೆ. ಈ ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 

ಪ್ರತ್ಯೇಕ ‍ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ವಿಚಾರಣೆ ರದ್ದುಗೊಳಿಸಿದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌ ಹಾಗೂ ಪ್ರಸನ್ನ ಬಿ.ವರಾಳೆ ಪೀಠವು ತೀರ್ಪು ನೀಡಿದೆ. 

ADVERTISEMENT

ಪ್ರಕರಣವೇನು ?:

ಕೆ.ಜಿ.ಯಲ್ಲಪ್ಪ ರೆಡ್ಡಿ ಎಂಬವರು ದೊಡ್ಡತೇಗೂರಿನಲ್ಲಿ 19 ಗುಂಟೆಯನ್ನು 1986ರಲ್ಲಿ ಖರೀದಿಸಿದ್ದರು. ರೆಡ್ಡಿ ಅವರಿಗೆ ಸುಧನ್ವ ರೆಡ್ಡಿ, ಗುರುವ ರೆಡ್ಡಿ ಹಾಗೂ ಉಮೇಧ ರೆಡ್ಡಿ ಎಂಬ ಮೂವರು ಗಂಡು ಮಕ್ಕಳು. ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ ಕಾತ್ಯಾಯಿನಿ ಸೇರಿ ಐವರು ಪುತ್ರಿಯರು. ಸುಧನ್ವ ರೆಡ್ಡಿಯ ಪುತ್ರರಾದ ಸಿದ್ಧಾರ್ಥ ಪಿ.ಎಸ್‌.ರೆಡ್ಡಿ, ವಿಕ್ರಮ್ ಪಿ.ಎಸ್‌.ರೆಡ್ಡಿ ಆರೋಪಿಗಳು. 

ನಮ್ಮ ಮೆಟ್ರೊ ಕಾಮಗಾರಿಗಾಗಿ ಮೆಟ್ರೊ ನಿಗಮವು ಈ ಜಾಗವನ್ನು ಸ್ವಾಧೀನಪಡಿಸಿಕೊಂಡು ₹33 ಕೋಟಿ
ಪರಿಹಾರ ಮೊತ್ತ ಮಂಜೂರು ಮಾಡಿತ್ತು. ಈ ಪರಿಹಾರ ಮೊತ್ತವು ಎಂಟು ಮಕ್ಕಳಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ಅರ್ಜಿದಾರರ ವಾದ. 

ಆದಾಗ್ಯೂ, ಹಿರಿಯ ಸಹೋದರ ಸುಧನ್ವ ರೆಡ್ಡಿ ಮತ್ತು ಇಬ್ಬರು ಪುತ್ರರು ₹33 ಕೋಟಿಯನ್ನು ತಾವೇ ಲಪಟಾಯಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು. ಗ್ರಾಮ ಲೆಕ್ಕಿಗ ನರಸಿಂಹಯ್ಯಗೆ ಲಂಚ ನೀಡಿ 2021ರಲ್ಲಿ ನಕಲಿ ವಂಶ ವೃಕ್ಷ ಸೃಷ್ಟಿಸಿದ್ದರು. ಈ ವಂಶ ವೃಕ್ಷದ ಪ್ರಕಾರ, ಯಲ್ಲಪ್ಪ ರೆಡ್ಡಿ ಮೂವರು ಗಂಡು
ಮಕ್ಕಳನ್ನಷ್ಟೇ ಹೊಂದಿದ್ದಾರೆ. 

ಇದಲ್ಲದೆ, ಆರೋಪಿಗಳು 2005ರಲ್ಲೇ ಆಸ್ತಿ ವಿಭಜನೆ ಪತ್ರ ಸಿದ್ಧ ಪಡಿಸಿದ್ದರು. ಇದರ ಪ್ರಕಾರ, ಯಲ್ಲಪ್ಪ ರೆಡ್ಡಿ ತಮ್ಮ ಆಸ್ತಿಯನ್ನು ಸಿದ್ಧಾರ್ಥ್ ಪಿ.ಎಸ್.ರೆಡ್ಡಿ ಮತ್ತು ವಿಕ್ರಮ್ ಪಿ.ಎಸ್.ರೆಡ್ಡಿ, ಗುರುವಾ ರೆಡ್ಡಿ ಮತ್ತು ಉಮೇಧಾ ರೆಡ್ಡಿ ಅವರಿಗೆ ಸಮಾನವಾಗಿ ಹಂಚಿದ್ದರು. ಈ ದಾಖಲೆಗಳ ಆಧಾರದಲ್ಲಿ ಸಹೋದರರು ಮೆಟ್ರೊ ನಿಗಮ
ದಿಂದ ಪರಿಹಾರ ಪಡೆದಿದ್ದರು. ಯಲ್ಲಪ್ಪರೆಡ್ಡಿ ಅವರಿಗೆ ಐವರು ಪುತ್ರಿಯರಿದ್ದಾರೆ ಎಂಬ ಉಲ್ಲೇಖ ಆಸ್ತಿ ವಿಭಜನೆ ಪತ್ರದಲ್ಲಿದೆ. ಆದರೆ, ಮೆಟ್ರೊ ನಿಗಮ ಸೂಕ್ತ ವಂಶವೃಕ್ಷದ ದಾಖಲೆ ಪಡೆಯದೆಯೇ ಪರಿಹಾರ ಮಂಜೂರು ಮಾಡಿತ್ತು. 

ಯೂಟರ್ನ್‌ ಹೊಡೆದ ಅಪ್ಪ

ಈ ನಡುವೆ, ಈ ಪರಿಹಾರವನ್ನು ತನ್ನ ಮೊದಲ ಪತ್ನಿಯ ಮಕ್ಕಳೊಂದಿಗೆ (ಪ್ರಕರಣದ ಆರೋಪಿಗಳು) ಹಂಚಿಕೊಳ್ಳುವುದಾಗಿ ಸುಧನ್ವ ರೆಡ್ಡಿ ಹೇಳಿದ್ದರು. ಇದಕ್ಕೆ ಇಬ್ಬರು ಮಕ್ಕಳು ಒಪ್ಪಿರಲಿಲ್ಲ. ತನಗೂ ಸಮಾನ ಪಾಲು ನೀಡಬೇಕು ಎಂದು ಆಗ್ರಹಿಸಿ ಎರಡನೇ ಪತ್ನಿಯ ಮಗ ಪ್ರಜ್ವಲ್‌ ರೆಡ್ಡಿ ಪ್ರಕರಣ ದಾಖಲಿಸಿದ್ದರು. ಪರಿಹಾರ ಮೊತ್ತ ಸಿಕ್ಕದ ಕಾರಣ ಕುಪಿತಗೊಂಡ ಸುಧನ್ವ ರೆಡ್ಡಿ 2005ರಲ್ಲಿ ನಕಲಿ ಆಸ್ತಿ ವಿಭಜನೆ ಪತ್ರ ಸೃಷ್ಟಿಸಿದ್ದನ್ನು ಬಹಿರಂಗಪಡಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವಿಭಜನೆ ಪತ್ರ ಮಾಡಲಾಗಿದೆ ಎಂದು ಆರೋಪಿಸಿ ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರವನ್ನೂ ಬರೆದಿದ್ದರು. ಇದರ ಬೆನ್ನಲ್ಲೇ, ಪರಿಹಾರ ಮೊತ್ತ ಪಾವತಿಯನ್ನು ಕೆಐಎಡಿಬಿ ತಡೆ ಹಿಡಿದಿತ್ತು. ₹5.9 ಕೋಟಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿತ್ತು. ಕೆಐಎಡಿಬಿ ಈಗಾಗಲೇ ₹27 ಕೋಟಿಯನ್ನು ಸಿದ್ಧಾರ್ಥ ರೆಡ್ಡಿ, ವಿಕ್ರಮ್‌ ರೆಡ್ಡಿ, ಉಮೇಧ ರೆಡ್ಡಿ ಹಾಗೂ ಅಶೋಕ ರೆಡ್ಡಿ ಅವರಿಗೆ ವಿತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.