ADVERTISEMENT

ಬೆಂಗಳೂರು: ಮೆಟ್ರೊ ಕಾಮಗಾರಿಗೆ ಬಳಸುವ ಕ್ರೇನ್‌ ಟವರ್‌ ಬಿದ್ದು ಐವರಿಗೆ ಗಾಯ

ತುಂಡಾಗಿ ಕ್ರೇನ್ ಟವರ್ ಬಿದ್ದು ನಾಲ್ಕು ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 19:27 IST
Last Updated 12 ಅಕ್ಟೋಬರ್ 2025, 19:27 IST
ಮೆಟ್ರೊ ಕಾಮಗಾರಿಗೆ ಬಳಸುತ್ತಿರುವ ಬೃಹತ್‌ ಗಾತ್ರದ ಕ್ರೇನ್‌ನ ಟವರ್‌ ತುಂಡಾಗಿ ಕಾರ್ಮಿಕರ ಶೆಡ್‌ಗಳ ಮೇಲೆ ಬಿದ್ದಿದೆ. 
ಮೆಟ್ರೊ ಕಾಮಗಾರಿಗೆ ಬಳಸುತ್ತಿರುವ ಬೃಹತ್‌ ಗಾತ್ರದ ಕ್ರೇನ್‌ನ ಟವರ್‌ ತುಂಡಾಗಿ ಕಾರ್ಮಿಕರ ಶೆಡ್‌ಗಳ ಮೇಲೆ ಬಿದ್ದಿದೆ.    

ಕೆ.ಆರ್‌.ಪುರ: ಮೆಟ್ರೊ ಕಾಮಗಾರಿಗೆ ಬಳಸುವ ಬೃಹತ್‌ ಗಾತ್ರದ ಕ್ರೇನ್‌ನ ಟವರ್‌ ತುಂಡಾಗಿ ಕಾರ್ಮಿಕರ ಶೆಡ್‌ಗಳ ಮೇಲೆ ಬಿದ್ದ ಪರಿಣಾಮ ಐವರು ಕಾರ್ಮಿಕರು ಗಾಯಗೊಂಡಿದ್ದು, ನಾಲ್ಕು ಮನೆಗಳಿಗೆ ಹಾನಿಯಾಗಿರುವ ಘಟನೆ ಆವಲಹಳ್ಳಿಯ ಮೇಡಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಘಟನೆಯಲ್ಲಿ ಬಿಹಾರದ ಲಾಲೂ (30), ಕುರ್ಬನ್‌ (19), ಇಲಿಯಾಜ್‌ (38), ಸಮೀಮ್‌ (28) ಮತ್ತು ಶಾಮದೇವ್‌ (56) ಗಾಯಗೊಂಡಿದ್ದು, ಶ್ರೀಸತ್ಯಸಾಯಿ ಆಸ್ಪತ್ರೆಯ ತೀವ್ರ‌ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಪೈಕಿ ಲಾಲೂ ಮತ್ತು ಕುರ್ಬನ್‌ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಕಾರ್ಮಿಕರು ವಾಸವಾಗಿದ್ದ ಶೆಡ್‌ಗಳು ಹಾನಿಗೀಡಾಗಿವೆ. ಬೆಳಿಗ್ಗೆ 11.30ರ ಸುಮಾರಿಗೆ ಮೇಡಹಳ್ಳಿ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಮೆಡಹಳ್ಳಿ ಬಳಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ಎಎಸ್ ಕ್ರೇನ್‌ ಸರ್ವೀಸ್‌ನಿಂದ ಭಾರೀ ಗಾತ್ರದ ವಸ್ತುಗಳನ್ನು ಮೇಲಕ್ಕೆ ಎತ್ತುವುದು, ಇಳಿಸುವುದು ಮಾಡಲಾಗುತ್ತಿದೆ. ಆದರೆ, ಜನವಸತಿ ಪ್ರದೇಶದಲ್ಲಿ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ಸ್ಥಳೀಯರು ಪೊಲೀಸರು, ಬಿಬಿಎಂಪಿಗೆ ದೂರು ನೀಡಿದ್ದರು. ಆದರೂ ಕ್ರಮಕೈಗೊಂಡಿಲ್ಲ.

ಜನ ವಸತಿ ಪ್ರದೇಶ ಸಮೀಪದ ಖಾಲಿ ಜಾಗದಲ್ಲಿ ಕ್ರೇನ್‌ಗಳನ್ನು ನಿಲುಗಡೆ ಮಾಡಲಾಗಿದ್ದು, ಭಾನುವಾರ ಬೆಳಿಗ್ಗೆ ಈ ಜಾಗದಲ್ಲಿ ಕ್ರೇನ್‌ಗಳನ್ನು ದುರಸ್ತಿ ಮಾಡಿ, ಪ್ರಾಯೋಗಿಕವಾಗಿ ಕೆಲ ವಸ್ತುಗಳನ್ನು ಎತ್ತುವುದು ಮಾಡಲಾಗುತ್ತಿತ್ತು. ಈ ವೇಳೆ ಕ್ರೇನ್‌ ಟವರ್‌ ತುಂಡಾಗಿ ಕಾರ್ಮಿಕರು ವಾಸವಿದ್ದ ಶೆಡ್‌ಗಳ ಮೇಲೆ ಬಿದ್ದಿದೆ. ಕ್ರೇನ್‌ಗಳು ಚಂದ್ರಶೇಖರ್ ಎಂಬುವರಿಗೆ ಸೇರಿದ್ದು ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಆವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.