ADVERTISEMENT

Bengaluru Metro Fare Hike | ಮೆಟ್ರೊ ದುಬಾರಿ: ಪ್ರಯಾಣಕ್ಕೆ ಪರ್ಯಾಯ ದಾರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 0:18 IST
Last Updated 22 ಫೆಬ್ರುವರಿ 2025, 0:18 IST
ಬೆಂಗಳೂರು ಮೆಟ್ರೊ (ಸಂಗ್ರಹ ಚಿತ್ರ)
ಬೆಂಗಳೂರು ಮೆಟ್ರೊ (ಸಂಗ್ರಹ ಚಿತ್ರ)   
ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪ್ರಯಾಣ ಸಮಯವನ್ನು ಉಳಿತಾಯ ಮಾಡುತ್ತಿದ್ದ ನಮ್ಮ ಮೆಟ್ರೊ ಪ್ರಯಾಣದರವನ್ನು ವಿಪರೀತವಾಗಿ ಏರಿಸಿ ‍ಪ್ರಯಾಣಿಕರನ್ನು ಕಳೆದುಕೊಂಡಿದೆ. ಜನರು ಬಿಎಂಟಿಸಿ ಬಸ್‌, ಖಾಸಗಿ ವಾಹನಗಳಲ್ಲಿ ಸಂಚರಿಸುವ ಮೂಲಕ ಪರ್ಯಾಯ ದಾರಿ ಕಂಡುಕೊಂಡಿದ್ದಾರೆ. ಮೆಟ್ರೊ ಪ್ರಯಾಣದರ ಇಳಿಸುವ ಮೂಲಕ ಜನರು ಮೆಟ್ರೊಗೆ ಮರಳುವಂತೆ ಮಾಡಬೇಕು ಎಂಬುದು ಜನರ ಒತ್ತಾಯವಾಗಿದೆ.
ನಮ್ಮ ಮೆಟ್ರೊ ಜನಸಾಮಾನ್ಯರಿಗೆ ಹತ್ತಿರವಾಗಿತ್ತು. ಪ್ರಯಾಣದ ದರವನ್ನು ವಿಪರೀತವಾಗಿ ಹೆಚ್ಚಿಸಿ ನಮ್ಮನ್ನು ‘ನಮ್ಮ ಮೆಟ್ರೊ’ದಿಂದ ದೂರ ಮಾಡಿದೆ. ಶಕ್ತಿ ಯೋಜನೆಯ ಮೂಲಕ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಇದೆ. ಆದರೂ ಸಮಯ ಉಳಿಸಲು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದೆ. ಪ್ರಯಾಣದರವನ್ನು ದುಬಾರಿ ಮಾಡಿದ ಮೇಲೆ ಮೆಟ್ರೊದಲ್ಲಿ ಸಂಚರಿಸುವುದನ್ನು ನಿಲ್ಲಿಸಿದ್ದೇನೆ. ದರ ಇಳಿಕೆ ಮಾಡಿ ನಿಜಾರ್ಥದಲ್ಲಿ ‘ನಮ್ಮ’ ಮೆಟ್ರೊ ಮಾಡಿದರೆ ಮಾತ್ರ ಮತ್ತೆ ಮೆಟ್ರೊದಲ್ಲಿ ಸಂಚಾರ ಮಾಡುತ್ತೇನೆ.
ಸುಧಾ ರಾ. ಶೆಟ್ಟಿ, ಗೃಹಿಣಿ, ಶ್ರೀನಗರ
ರಾಜಧಾನಿಯ ಸಂಚಾರದ ಜೀವನಾಡಿಯಾಗಿ ಪ್ರಯಾಣಿಕರಿಗೆ ನಮ್ಮ ಮೆಟ್ರೊ ಸಹಕಾರಿಯಾಗಿತ್ತು. ವಾಹನದಟ್ಟಣೆಯ ಕಿರಿಕಿರಿಯಿಂದ, ಸಮಯ ಹಾಗೂ ಮಾಲಿನ್ಯದಿಂದ ದೂರವಾಗಿ ನೆಮ್ಮದಿಯಿಂದ ಪ್ರಯಾಣಿಸುತ್ತಿದ್ದರು. ಈಗ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಪ್ರಯಾಣ ದರವನ್ನು ದುಬಾರಿ ಮಾಡಲಾಗಿದೆ. ನಿತ್ಯ ಕಾಯಕ ಮಾಡುವ ಜನಸಾಮಾನ್ಯರು ಮೆಟ್ರೊದಲ್ಲಿ ಪ್ರಯಾಣಿಸದಂತಾಗಿದೆ. ಸಂಚಾರವು ಸಾರ್ವಜನಿಕ ಸೌಲಭ್ಯವಾಗಬೇಕೆ ಹೊರತು, ಹೊರೆಯಾಗಬಾರದು. ಅವೈಜ್ಞಾನಿಕ ಲೆಕ್ಕಾಚಾರವನ್ನು ಕೈಬಿಟ್ಟು ದರ ಕಡಿಮೆ ಮಾಡಬೇಕು.
ಸು.ಜಗದೀಶ, ಬನ್ನೇರುಘಟ್ಟ
ಜನರು ಮೆಟ್ರೊ ತೊರೆದು ತಮ್ಮ ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ. ಇದರಿಂದ ವಾಹನದಟ್ಟಣೆ ಅಧಿಕಗೊಂಡಿದೆ. ರಸ್ತೆಯಲ್ಲಿ ದೂಳು, ಹೊಗೆ ಹೆಚ್ಚಾಗಿದೆ. ಇದು ಅನಾರೋಗ್ಯಕ್ಕೆ ಕಾರಣವಾಗಲಿದೆ. ಸರ್ಕಾರಗಳು ಕೆಳಸೇತುವೆ, ಮೇಲುಸೇತುವೆ, ಸುರಂಗ ರಸ್ತೆ, ರಸ್ತೆ ವಿಸ್ತರಣೆ ಎಂದು ಖಾಸಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಬದಲು ಮೆಟ್ರೊ ದರ ಇಳಿಸಿ ಅದನ್ನು‌ ಪ್ರಯಾಣಿಕ ಸ್ನೇಹಿ ಮಾಡುವುದು ಒಳ್ಳೆಯದರು. 
ಡಾ. ಸುಧಾ ಕೆ.
ಏಕಾಏಕಿ ಮೆಟ್ರೊ ದರ ಏರಿಕೆ ಮಾಡಿ ಬಿಎಂಆರ್‌ಸಿಎಲ್‌ ಜನಸಾಮಾನ್ಯರಿಗೆ ತೊಂದರೆಯನ್ನು ಉಂಟುಮಾಡಿದೆ. ದರ ಕಡಿಮೆ ಮಾಡಲಾಗಿದೆ ಎಂದು ಹೇಳುತ್ತಿದ್ದರೂ ಇನ್ನೂ ದುಬಾರಿ ದರವೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ದರ ನಿಗದಿ ಮಾಡಬೇಕು. ಎಲ್ಲ ವರ್ಗದ ಜನರು ಸಂಚರಿಸುವಂತೆ ಮಾಡಬೇಕು.
ಪ್ರಮೀಳಾ, ಕೆಎಸ್‌ಡಿಎಲ್‌
ನಮ್ಮಂತಹ ಸಾವಿರಾರು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಇತ್ಯಾದಿ ವರ್ಗದ ಪ್ರಯಾಣಿಕರಿಗೆ ‘ನಮ್ಮ ಮೆಟ್ರೊ’ದಿಂದಾಗಿ ಬೆಂಗಳೂರು ವಾಹನ ದಟ್ಟಣೆಯಿಂದ ಮುಕ್ತಿ ಸಿಕ್ಕಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಸಂಕಷ್ಟಕ್ಕೆ ದೂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದೀಗ ಮೆಟ್ರೊ ಪ್ರಯಾಣದರವನ್ನು ಕೂಡ ಹೆಚ್ಚಿಸಿ ಬರೆ ಎಳೆದಿದೆ. ಪ್ರಯಾಣಿಕರು ಮೆಟ್ರೊ ತ್ಯಜಿಸಿ, ಖಾಸಗಿ ವಾಹನಗಳನ್ನು ಬಳಸುವಂತೆ ಮಾಡಿದೆ. 
ಲಕ್ಷ್ಮೀನಾರಾಯಣ ಕೆ., ವಿದ್ಯಾರ್ಥಿ, ವಿಜಯನಗರ
ಪ್ರಯಾಣ ದರವನ್ನು ಏರಿಸುವ ಮೂಲಕ ಇದು ನಿಮ್ಮದಲ್ಲ ಮೆಟ್ರೊ ನಮ್ಮ ಮೆಟ್ರೊ ಎಂದು ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಹೇಳಿದಂತಿದೆ. ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರನ್ನು ನಮ್ಮ ಮೆಟ್ರೊ ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಮೆಟ್ರೊ ಪ್ರಯಾಣ ಸಾಮಾನ್ಯ ಜನರಿಗಲ್ಲ ಎಂದು ನಿರೂಪಿಸಲು ಸರ್ಕಾರಗಳು ಹೊರಟಂತಿದೆ.
ಆಂಜನೇಯ, ದೀಪನಂಜಲಿ ನಗರ
ನಮ್ಮ ಮೆಟ್ರೊ ಈಗ ನಮ್ಮ ಹಿತ ಕಾಯುವ ಸಾರಿಗೆಯಾಗಿ ಉಳಿದಿಲ್ಲ. ಜನರ ನಂಬಿಕೆ ಕಳೆದುಕೊಂಡಿದೆ. ಏಕಾಏಕಿ ಪ್ರಯಾಣ ದರವನ್ನು ದುಬಾರಿ ಮಾಡುವ ಮೂಲಕ ಇಂತಹ ಟ್ರಾಫಿಕ್ ಸಮಸ್ಯೆಯಲ್ಲೂ ಆರಾಮಾಗಿ, ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಿದೆವು ಎಂಬ ಸಂತೋಷವನ್ನು ಸಾರ್ವಜನಿಕರಿಂದ ಕಸಿದುಕೊಂಡಿದೆ. ಮುಂದಿನ ವರ್ಷಕ್ಕೆ ಹೊಸ ಮಾರ್ಗಗಳು ಸಂಚಾರ ಮುಕ್ತವಾಗಲಿವೆ ಎಂಬ ವಿಷಯ, ಪ್ರಯಾಣಿಕರಲ್ಲಿ ಯಾವ ಕುತೂಹಲವನ್ನೂ ಕೆರಳಿಸಿಲ್ಲ. ಯಾವ ಮಾರ್ಗದಲ್ಲಿ ಯಾವ ಮೆಟ್ರೊ ಸಂಚರಿಸಿದರೆ ನಮಗೇನು ಎನ್ನುವ ಅಭಿಪ್ರಾಯ ಮೂಡುವಂತೆ ಮಾಡಿದೆ.
ರಮ್ಯ ಕವೀಶ್, ರಾಜರಾಜೇಶ್ವರಿ ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.