
ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ಕೆಂಗೇರಿ ನಿಲ್ದಾಣದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ಮೆಟ್ರೊ ರೈಲು ಬರುವಾಗ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯ ಶಾಂತನಗೌಡ ಪೊಲೀಸ ಪಾಟೀಲ (39) ಆತ್ಮಹತ್ಯೆ ಮಾಡಿಕೊಂಡವರು.
ಅವರಿಗೆ ಏಳು ವರ್ಷಗಳ ಹಿಂದೆ ಮದುವೆಯಾಗಿತ್ತು. ಎಂಜಿನಿಯರಿಂಗ್ ಪದವೀಧರರಾದ ಅವರು ಒಂದು ವರ್ಷದಿಂದ ಕೆಲಸ ಇಲ್ಲದೇ ಆರ್ಥಿಕ ಸಮಸ್ಯೆ ಉಂಟಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇತ್ತೀಚೆಗೆ ಬಿಡದಿಯಲ್ಲಿ ಇರುವ ಕಂಪನಿಯೊಂದಕ್ಕೆ ಸೇರಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಶಾಂತನಗೌಡ ಅವರು ಶುಕ್ರವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಬಂದು ಕೆಂಗೇರಿ ಮೆಟ್ರೊ ನಿಲ್ದಾಣದ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿ ಬಂದಿದ್ದರು. ಬೆಳಿಗ್ಗೆ 8.15ಕ್ಕೆ ರೈಲು ಬರುತ್ತಿರುವುದನ್ನು ಕಂಡು ಹಾರಿದ್ದರು. ಹಳಿಯ ನಡುವೆ ಸಿಲುಕಿಕೊಂಡು ಮೃತಪಟ್ಟಿದ್ದು, ಪೊಲೀಸರು ಬಂದ ಬಳಿಕ ಮೃತದೇಹವನ್ನು ಮೇಲಕ್ಕೆತ್ತಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದರಿಂದಾಗಿ ನೇರಳೆ ಮಾರ್ಗದಲ್ಲಿ ಒಂದೂವರೆ ತಾಸು ಸಂಚಾರ ವ್ಯತ್ಯಯ ಉಂಟಾಯಿತು. ಮೈಸೂರು ರಸ್ತೆಯಿಂದ ಚಲ್ಲಘಟ್ಟವರೆಗೆ ರೈಲು ಸಂಚಾರ ಸ್ಥಗಿತಗೊಂಡಿತು. ವೈಟ್‌ಫೀಲ್ಡ್‌ನಿಂದ ಮೈಸೂರು ರಸ್ತೆವರೆಗೆ ಮಾತ್ರ ಎಂದಿನಂತೆ ಸಂಚಾರ ಮುಂದುವರಿದಿತ್ತು. ಬೆಳಿಗ್ಗೆ ಕೆಲಸಕ್ಕೆ ತೆರಳುವ ಧಾವಂತದಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಚಲ್ಲಘಟ್ಟ, ಕೆಂಗೇರಿ, ಕೇಂಗೇರಿ ಬಸ್ ಟರ್ಮಿನಲ್, ಪಟ್ಟಣಗೆರೆ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ಪಂತರಪಾಳ್ಯ ನಿಲ್ದಾಣಗಳಿಗೆ ಬಂದಿದ್ದ ಪ್ರಯಾಣಿಕರು ನಿಲ್ದಾಣದಿಂದ ಹೊರಬಂದು ಬಸ್, ಆಟೊಗಳಿಗೆ ಕಾಯುವಂತಾಯಿತು.
ಬೆಳಿಗ್ಗೆ 9.45ರ ಬಳಿಕ ಸಂಚಾರ ವ್ಯವಸ್ಥೆ ಸರಿಯಾಯಿತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.