ADVERTISEMENT

ಮೆಟ್ರೊ ಕೆಂಪು ಮಾರ್ಗ: ವರದಿ ಸಲ್ಲಿಸಿದ ಸ್ವತಂತ್ರ ಸಮಿತಿ

ಸರ್ಜಾಪುರ–ಹೆಬ್ಬಾಳ ಮಾರ್ಗದ ಅಧಿಕ ಅಂದಾಜು ವೆಚ್ಚಕ್ಕೆ ಸಂಬಂಧಿಸಿ ವಿವರ ಕೇಳಿದ್ದ ಕೇಂದ್ರ ಸರ್ಕಾರ

ಬಾಲಕೃಷ್ಣ ಪಿ.ಎಚ್‌
Published 1 ಜನವರಿ 2026, 20:03 IST
Last Updated 1 ಜನವರಿ 2026, 20:03 IST
<div class="paragraphs"><p>ನಮ್ಮ ಮೆಟ್ರೊ ಕೆಂಪು ಮಾರ್ಗ</p></div>

ನಮ್ಮ ಮೆಟ್ರೊ ಕೆಂಪು ಮಾರ್ಗ

   

ಬೆಂಗಳೂರು: ಸರ್ಜಾಪುರ–ಹೆಬ್ಬಾಳವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ಕೆಂಪು ಮಾರ್ಗದ ಬಗ್ಗೆ ಸ್ವತಂತ್ರ ಸಮಿತಿ ವರದಿ ಸಲ್ಲಿಸಿದೆ. ಈ ವರದಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪರಿಶೀಲಿಸಲಿದೆ.

36.59 ಕಿ.ಮೀ. ಉದ್ದದ ‘ಕೆಂಪು’ ಮಾರ್ಗವು 22.14 ಕಿ.ಮೀ. ಎತ್ತರಿಸಿದ ಮಾರ್ಗ, 14.45 ಕಿ.ಮೀ. ಸುರಂಗ ಮಾರ್ಗ ಒಳಗೊಂಡಿದೆ. ಎತ್ತರಿಸಿದ ಮಾರ್ಗದಲ್ಲಿ 17 ನಿಲ್ದಾಣ, ಸುರಂಗ ಮಾರ್ಗದಲ್ಲಿ 11 ನಿಲ್ದಾಣಗಳು ಇರಲಿವೆ. ₹ 28,405 ಕೋಟಿ ಅಂದಾಜು ವೆಚ್ಚ ಅಂದರೆ ಪ್ರತಿ ಕಿಲೋ ಮೀಟರ್‌ಗೆ ₹776.3 ಕೋಟಿ ಎಂದು ವಿಸ್ತೃತ ಯೋಜನಾ ವರದಿಯಲ್ಲಿ ತಿಳಿಸಲಾಗಿತ್ತು.

ADVERTISEMENT

ಈ ಯೋಜನೆಗೆ ಒಂದು ವರ್ಷದ ಹಿಂದೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಬಳಿಕ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಯೋಜನೆಯ ಅಂದಾಜು ವೆಚ್ಚ ಅಧಿಕವಾಗಿದೆ. ಈ ಬಗ್ಗೆ ವಿವರ ನೀಡುವಂತೆ ಆರು ತಿಂಗಳ ಹಿಂದೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿತ್ತು.

‘ನಿರ್ಮಾಣ ಹಂತದಲ್ಲಿರುವ ಕಾಳೇನ ಅಗ್ರಹಾರ–ನಾಗವಾರ ನಡುವಿನ ಗುಲಾಬಿ ಮಾರ್ಗವನ್ನು ಮಾನದಂಡವಾಗಿ ಇಟ್ಟುಕೊಂಡು ಕೆಂಪು ಮಾರ್ಗಕ್ಕೆ ಅಂದಾಜು ವೆಚ್ಚ ತಯಾರಿಸಲಾಗಿತ್ತು. ಪರಿಶೀಲನೆ ನಡೆಸಿ ವರದಿ ನೀಡುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೂಚಿಸಿದ್ದರಿಂದ ಸ್ವತಂತ್ರ ಸಮಿತಿ ನೇಮಕ ಮಾಡಲಾಗಿತ್ತು. ಅಂದಾಜು ವೆಚ್ಚದ ಬಗ್ಗೆ ಸಮರ್ಥನೆಯನ್ನು ಸ್ವತಂತ್ರ ಸಮಿತಿಯ ಮುಂದೆ ಇಟ್ಟಿದ್ದೇವೆ’ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ನಗರದ ಹೊರಗೆ ನಡೆಯುವ ಮೆಟ್ರೊ ಕಾಮಗಾರಿಗೆ ವೆಚ್ಚವು ಕಡಿಮೆ ಇರುತ್ತದೆ. ನಗರದ ಒಳಗೆ ಕಾಮಗಾರಿ ನಡೆಸಲು ಭಾರಿ ವೆಚ್ಚ ಮಾಡಬೇಕಾಗುತ್ತದೆ. ಕೆಂಪು ಮಾರ್ಗದಲ್ಲಿ 11 ಕಿ.ಮೀ. ಸುರಂಗ ಕೊರೆದು ಹಳಿ ನಿರ್ಮಿಸಬೇಕು. 11 ಭೂಗತ ನಿಲ್ದಾಣಗಳನ್ನು ನಿರ್ಮಿಸಬೇಕು. ಭೂಸ್ವಾಧೀನ, ಮಾರ್ಗ ರಚನೆ, ಹಳಿ ಜೋಡಣೆ, ನಿಲ್ದಾಣದ ಕಟ್ಟಡಗಳ ನಿರ್ಮಾಣ, ವಿದ್ಯುತ್‌ ಸರಬರಾಜು ವ್ಯವಸ್ಥೆ, ಸಿಗ್ನಲಿಂಗ್, ದೂರಸಂಪರ್ಕ, ಡಿಪೊಗಳು, ರೈಲು ಕೋಚ್‌ ಪೂರೈಕೆ ಹೀಗೆ ಒಟ್ಟು 13 ಅಂಶಗಳನ್ನು ಪರಿಗಣಿಸಿ ಅಂದಾಜು ವೆಚ್ಚವನ್ನು ತಯಾರಿಸಿರುವುದಾಗಿ ತಿಳಿಸಿದ್ದೇವೆ’ ಎಂದು ವಿವರ ನೀಡಿದರು.

ನಗರದ ಪ್ರಮುಖ ವಹಿವಾಟು ಪ್ರದೇಶಗಳಲ್ಲಿ ಒಂದಾಗಿರುವ ಕೋರಮಂಗಲವನ್ನು ಹಾದು ಹೋಗುವ ಕೆಂಪು ಮಾರ್ಗದ ಕಾಮಗಾರಿಯನ್ನು 2030ರ ವೇಳೆಗೆ ಪೂರ್ಣಗೊಳಿಸಿ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಇಟ್ಟುಕೊಂಡಿತ್ತು. ಒಂದು ವರ್ಷ ಕಳೆದಿದ್ದು, ಸದ್ಯದಲ್ಲೇ ಒಪ್ಪಿಗೆ ಸಿಕ್ಕಿದರೆ 2031ರಲ್ಲಿ ಸಂಚಾರ ಆರಂಭವಾಗಬಹುದು ಎಂದು ತಿಳಿಸಿದರು.

ನಿಲ್ದಾಣದ ಉದ್ದ ಕಡಿತ?

‘ಆರು ಕೋಚ್‌ಗಳ ರೈಲು ನಿಲುಗಡೆಗೆ ಸುರಂಗ ಮಾರ್ಗದಲ್ಲಿ 240–265 ಮೀಟರ್‌ ಉದ್ದದ ನಿಲ್ದಾಣ ನಿರ್ಮಿಸಲಾಗುತ್ತದೆ. ಅದೇ ಅಂದಾಜನ್ನು ಕೆಂಪು ಮಾರ್ಗದಲ್ಲಿಯೂ ನೀಡಲಾಗಿದೆ. ಮುಂದೆ ವಿಸ್ತ್ರೃತ ಯೋಜನಾ ವರದಿಯನ್ನು ಬದಲಾಯಿಸಲೇಬೇಕು. ವೆಚ್ಚ ಕಡಿಮೆ ಮಾಡಲೇಬೇಕು ಎಂದು ಸೂಚನೆ ಬಂದರೆ ಆಗ ಸುರಂಗ ಮಾರ್ಗದ ಉದ್ದವನ್ನು ಸ್ವಲ್ಪ ಕಡಿತಗೊಳಿಸಬೇಕಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ನ ತಜ್ಞ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ‘ಮೆಟ್ರೊ ನಿಲುಗಡೆಗೆ ತೊಂದರೆಯಾಗದಂತೆ ಸುರಂಗ ಮಾರ್ಗದ ಪ್ರತಿ ನಿಲ್ದಾಣವನ್ನು ಸುಮಾರು 40 ಮೀಟರ್‌ ಕಡಿತಗೊಳಿಸಬಹುದು. ಆಗ ₹ 3000 ಕೋಟಿ ವೆಚ್ಚ ಕಡಿಮೆ ಮಾಡಬಹುದು. ಉದ್ದ ಕಡಿಮೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ’ ಎಂದು ವಿಶ್ಲೇಷಿಸಿದ್ದಾರೆ.

ಕೇಂದ್ರದ ಒಪ್ಪಿಗೆ ನಿರೀಕ್ಷೆ ‘

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸ್ವತಂತ್ರ ಸಮಿತಿ ವರದಿ ಸಲ್ಲಿಸಿದೆ. ಸಚಿವಾಲಯವು ಪರಿಶೀಲಿಸಿ ಈಗಿರುವ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಅನುಮೋದನೆ ನೀಡಿದರೆ ಮುಂದಿನ ಕೆಲಸ ಆರಂಭಿಸುತ್ತೇವೆ. ಡಿಪಿಆರ್‌ ಬದಲಾಯಿಸಿ ಎಂದು ಹೇಳಿದರೆ ಬದಲಾವಣೆಗಳನ್ನು ಮಾಡುತ್ತೇವೆ. ಈ ವರ್ಷವೇ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದು ಹೆಬ್ಬಾಳ–ಸರ್ಜಾಪುರ ಮಾರ್ಗದ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ’ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.