ಬೆಂಗಳೂರು: ಮಾನವ ಅಂಗಾಂಗವನ್ನು ಶಸ್ತ್ರಚಿಕಿತ್ಸೆಗಾಗಿ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೊದಲ್ಲಿ ಶುಕ್ರವಾರ ರಾತ್ರಿ ಸಾಗಣೆ ಮಾಡಲಾಗಿದೆ.
ದೇಣಿಗೆಯಾಗಿ ನೀಡಲಾಗಿದ್ದ ಯಕೃತನ್ನು ಒಬ್ಬ ವೈದ್ಯರು ಮತ್ತು ಏಳು ವೈದ್ಯಕೀಯ ಸಿಬ್ಬಂದಿಯು ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೊ ನಿಲ್ದಾಣಕ್ಕೆ ಆಂಬುಲೆನ್ಸ್ ಮೂಲಕ ಶುಕ್ರವಾರ ರಾತ್ರಿ 8.38ಕ್ಕೆ ತಂದಿದ್ದರು. ಅಲ್ಲಿ ತಕ್ಷಣ ಸಹಾಯಕ ಭದ್ರತಾ ಅಧಿಕಾರಿ (ಎಎಸ್‌ಒ) ಮತ್ತು ಮೆಟ್ರೊ ಸಿಬ್ಬಂದಿ ತಂಡವನ್ನು ಬರಮಾಡಿಕೊಂಡರು. ದಾಖಲೆ ಕಾರ್ಯ ಮತ್ತು ಭದ್ರತಾ ಪರಿಶೀಲನೆಗಳನ್ನು ಸಂಯೋಜಿಸಿದರು.
ಯಕೃತನ್ನು ಹೊತ್ತ ಮೆಟ್ರೊ ರೈಲು ರಾತ್ರಿ 8.42ಕ್ಕೆ ವೈಟ್‌ಫೀಲ್ಡ್‌ನಿಂದ ಹೊರಟು, ರಾತ್ರಿ 9.48ಕ್ಕೆ ರಾಜರಾಜೇಶ್ವರಿ ನಗರ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಮತ್ತೊಬ್ಬ ಎಎಸ್ಒ ಮತ್ತು ಮೆಟ್ರೊ ಸಿಬ್ಬಂದಿ ವೈದ್ಯಕೀಯ ತಂಡಕ್ಕೆ ನೆರವಾದರು. ಅಲ್ಲೆ ಕಾಯುತ್ತಿದ್ದ ಆಂಬುಲೆನ್ಸ್‌ನಲ್ಲಿ ಅಂಗಾಂಗವನ್ನು ಇಟ್ಟು ಸ್ಪರ್ಶ್ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು.
ಅಗತ್ಯ ಸಮಯದ ಒಳಗೆ ಅಂಗಾಂಗ ತಲುಪಿಸಿ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ಸಮಯೋಚಿತ ಸಹಕಾರ ಮತ್ತು ಜವಾಬ್ದಾರಿತ್ವ ತೋರ್ಪಡಿಸಿದ ಸಹಾಯಕ ಭದ್ರತಾ ಅಧಿಕಾರಿಗಳು, ಗೃಹರಕ್ಷಕ ದಳದ ಸಿಬ್ಬಂದಿ ಮತ್ತು ಮೆಟ್ರೊ ಸಿಬ್ಬಂದಿಗೆ ವೈದ್ಯಕೀಯ ತಂಡವು ಕೃತಜ್ಞತೆ ಸಲ್ಲಿಸಿತು.
ಈ ಕಾರ್ಯಾಚರಣೆಯನ್ನು ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಸಂಯುಕ್ತ ಕಾರ್ಯವಿಧಾನ ಆದೇಶದ ಮಾರ್ಗಸೂಚಿಗಳಡಿ ನೆರವೇರಿಸಲಾಯಿತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಮೆಟ್ರೊ ರೈಲು ಮೂಲಕ ಅಂಗಾಂಗ ಸಾಗಣೆ ನಡೆಸಿದ ದೇಶದ ಎರಡನೇ ಘಟನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.