ADVERTISEMENT

ತುಮಕೂರಿಗೆ ಮೆಟ್ರೊ: ಡಿಪಿಆರ್‌ಗೆ ಟೆಂಡರ್‌

ಮಾದಾವರದಿಂದ ತುಮಕೂರುವರೆಗೆ 59.6 ಕಿ.ಮೀ: 27 ನಿಲ್ದಾಣ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 13:10 IST
Last Updated 18 ನವೆಂಬರ್ 2025, 13:10 IST

ಬೆಂಗಳೂರು: ‘ನಮ್ಮ ಮೆಟ್ರೊ’ ಅನ್ನು ತುಮಕೂರುವರೆಗೆ ವಿಸ್ತರಿಸುವ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ.

ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಮಾದಾವರದಿಂದ ತುಮಕೂರುವರೆಗೆ 59.6 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ಕಲ್ಪಿಸುವ ಸಂಬಂಧ ಪ್ರಕ್ರಿಯೆಗಳನ್ನು ಆರಂಭಿಸಿದೆ. ಇದರ ಮೊದಲ ಭಾಗವಾಗಿ ಡಿಪಿಆರ್‌ ಪ್ರಕ್ರಿಯೆ ಶುರುವಾಗಿದೆ.

ಈ ಯೋಜನೆಯನ್ನು ಸಾರ್ವಜನಿಕ– ಖಾಸಗಿ ಸಹಭಾಗಿತ್ವ(ಪಿಪಿಪಿ) ಕೈಗೊಳ್ಳಲು ಚಿಂತನೆ ನಡೆದಿದೆ.

ADVERTISEMENT

ಬಿಎಂಆರ್‌ಸಿಎಲ್‌ ಪ್ರಕಾರ, ಈ ಮಾರ್ಗದ ಆರಂಭಿಕ ಯೋಜನಾ ವೆಚ್ಚ ₹20,896 ಕೋಟಿ ಆಗಲಿದ್ದು, ಈ ಮಾರ್ಗದಲ್ಲಿ 27 ನಿಲ್ದಾಣಗಳು ಇರಲಿವೆ. ಮಾದಾವರ– ನೆಲಮಂಗಲ ಮಾರ್ಗದಲ್ಲಿ 1 ರಿಂದ 2 ಕಿ.ಮೀ.ಗೆ ಒಂದರಂತೆ ಹಾಗೂ ನೆಲಮಂಗಲದಿಂದ ತುಮಕೂರುವರೆಗೆ 4 ರಿಂದ 5 ಕಿ.ಮೀ. ವ್ಯಾ‍ಪ್ತಿಯಲ್ಲಿ ಒಂದೊಂದು ನಿಲ್ದಾಣ ಇರುವ ಸಾಧ್ಯತೆ ಇದೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಸಂ‍ಪರ್ಕ ಜಾಲ ಬಲಗೊಳಿಸುವ ಯೋಜನೆಯಾಗಿ ತುಮಕೂರು ಕಾರಿಡಾರ್‌ ಅನ್ನು ನಮ್ಮ ಮೆಟ್ರೊ 4ನೇ ಹಂತದ ಅಡಿ ರೂಪಿಸಲಾಗುತ್ತಿದೆ. 210.9 ಕಿ.ಮೀ. ವಿಸ್ತರಣೆ ವ್ಯಾಪ್ತಿಯ ಮೂರು ಹೊಸ ಮಾರ್ಗಗಳಲ್ಲಿ ಇದೂ ಒಂದಾಗಿದೆ. 

ಈ ಮಾರ್ಗದಲ್ಲಿ ಹಾಲಿ ಇರುವ ಬಸ್ ಟರ್ಮಿನಲ್‌, ರೈಲ್ವೆ ನಿಲ್ದಾಣಗಳ ಸಂಪರ್ಕ ಜಾಲ, ಹೊಸದಾಗಿ ರೂಪಿಬೇಕಾದ ಮಾರ್ಗಗಳ ಕುರಿತು ಡಿಪಿಆರ್‌ನಲ್ಲಿ ಉಲ್ಲೇಖಿಸಬೇಕಾಗುತ್ತದೆ.

‘ಮಾದಾವರದಿಂದ ತುಮಕೂರುವರೆಗೆ ಮಾರ್ಗ ಹೇಗಿರಬೇಕು ಎನ್ನುವ ಅಂಶವೂ ಪ್ರಮುಖವಾಗಲಿದೆ. ಮಾರ್ಗ ಹಾದು ಹೋಗುವ ಭಾಗದಲ್ಲಿನ ಭೂಪ್ರದೇಶದ ಪರಿಸ್ಥಿತಿ ನೋಡಿಕೊಂಡು ಸುರಂಗ ಮಾರ್ಗ, ಎತ್ತರಿಸಿದ ಮಾರ್ಗದಲ್ಲಿ ಸಂಚರಿಸಬೇಕಾದ ರೂಪು ರೇಷೆಗಳನ್ನು ಸೇರಿಸಬೇಕಾಗುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಬಿಡ್‌ ಹೇಗಿರಲಿದೆ

‘ಡಿಪಿಆರ್‌ ಪ್ರಸ್ತಾವನೆಯ ಮನವಿ ಸಲ್ಲಿಸಲು(ಆರ್‌ಎಫ್‌ಪಿ) ಐದು ದಿನಗಳ ಸಮಯವನ್ನು ಬಿಡ್ಡರ್‌ಗಳಿಗೆ ಬಿಎಂಆರ್‌ಸಿಎಲ್‌ ನೀಡಿದೆ. ಬಿಡ್‌ಗಳನ್ನು ನ.21ರಂದು ತೆರೆಯಲು ನಿಗಮ ಯೋಜಿಸುತ್ತಿದೆ. ಇದಾದ ಬಳಿಕ ಬಿಡ್ಡರ್‌ಗಳು ಒಪ್ಪಿಗೆ ಪತ್ರ ಸ್ವೀಕರಿಸದ ಐದು ತಿಂಗಳ ಅವಧಿಯಲ್ಲಿ ಡಿಪಿಆರ್‌ ತಯಾರಿಸುವ ಸಮಯ ಇರಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.