
ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಹೆಚ್ಚುವರಿಯಾಗಿ ಆರು ರೈಲು ಕೋಚ್‌ಗಳು ಬರಲಿವೆ. ಈ ಕೋಚ್‌ಗಳನ್ನು ಬಿಇಎಂಎಲ್ ಪೂರೈಕೆ ಮಾಡಲಿದೆ.
ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ₹ 414 ಕೋಟಿ ವೆಚ್ಚದಲ್ಲಿ ಕೋಚ್‌ಗಳನ್ನು (ಒಂದು ಕೋಚ್ ಅಂದರೆ ಆರು ಬೋಗಿಗಳ ಸೆಟ್) ನಿರ್ಮಿಸಲು ಒಪ್ಪಂದ ಮಾಡಿಕೊಂಡಿದೆ.
ಆರ್.ವಿ. ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ಕಾಮಗಾರಿಯು 2024ರಲ್ಲೇ ಮುಗಿದಿದ್ದರೂ ಕೋಚ್‌ಗಳು ಸಕಾಲದಲ್ಲಿ ಪೂರೈಕೆಯಾಗದೇ ಸಂಚಾರ ಒಂದು ವರ್ಷ ತಡವಾಗಿತ್ತು. ಕೊನೆಗೆ ಮೂರೇ ರೈಲು ಕೋಚ್‌ಗಳನ್ನು ಇಟ್ಟುಕೊಂಡು ಆಗಸ್ಟ್ 11ರಂದು ಸಂಚಾರ ಆರಂಭವಾಗಿತ್ತು.
ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ಸಿಗ್ನಲಿಂಗ್ ವ್ಯವಸ್ಥೆಯ ಈ ಮಾರ್ಗಕ್ಕೆ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ನಾನ್‌ಜಿಂಗ್ ಪುಜೆನ್ ಕಂಪನಿ ಲಿಮಿಟೆಡ್ ಸಂಸ್ಥೆಯು 90 ಬೋಗಿಗಳನ್ನು ( 15 ರೈಲು ಕೋಚ್) ಪೂರೈಸಬೇಕಿತ್ತು. ಭಾರತದಲ್ಲಿ ಬೋಗಿಗಳನ್ನು ಪೂರೈಸಲು ಪಶ್ಚಿಮ ಬಂಗಾಳದ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ನೊಂದಿಗೆ ಸಿಆರ್‌ಆರ್‌ಸಿ ಒಪ್ಪಂದ ಮಾಡಿಕೊಂಡಿತ್ತು. ಹಳದಿ ಮಾರ್ಗಕ್ಕೆ ಟಿಟಾಘರ್‌ನಿಂದ ಇಲ್ಲಿವರೆಗೆ ಕೇವಲ ಆರು ರೈಲು ಕೋಚ್‌ಗಳು ರವಾನೆಯಾಗಿದ್ದು, ಐದು ರೈಲುಗಳು ಸಂಚಾರ ನಡೆಸುತ್ತಿವೆ. ಆರನೇ ರೈಲಿನ ಮೂರು ಬೋಗಿಗಳು ಹೆಬ್ಬಗೋಡಿ ಡಿಪೊ ತಲುಪಿದ್ದು, ಇನ್ನು ಮೂರು ಬೋಗಿ ಇನ್ನೆರಡು ದಿನಗಳಲ್ಲಿ ತಲುಪಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಟಿಟಾಘರ್‌ನಿಂದ ಎಲ್ಲ 15 ರೈಲು ಕೋಚ್‌ಗಳು ತಲುಪಿದ ಮೇಲೂ ಹೆಚ್ಚುವರಿಯಾಗಿ ರೈಲುಗಳ ಅಗತ್ಯವಿದೆ. ಒಂದು ಮಾರ್ಗದಲ್ಲಿ ಕನಿಷ್ಠ ಎರಡು ರೈಲುಗಳನ್ನು ಮೀಸಲಾಗಿ ಇರಿಸಿಕೊಳ್ಳಬೇಕಾಗುತ್ತದೆ. ಮಾರ್ಗಮಧ್ಯೆ ರೈಲು ಕೆಟ್ಟುಹೋದರೆ ಬದಲಿಯಾಗಿ ಇಳಿಸಲು ಮೀಸಲು ರೈಲುಗಳು ಅಗತ್ಯ. ಇದಲ್ಲದೇ ಹೆಚ್ಚುವರಿ ದಟ್ಟಣೆ ಇರುವ ಕೆಲವೇ ನಿಲ್ದಾಣಗಳ ನಡುವೆ ಮಾತ್ರ ಹೆಚ್ಚುವರಿಯಾಗಿ (ಶಾರ್ಟ್ ಲೂಪ್) ಸಂಚಾರ ವ್ಯವಸ್ಥೆ ಮಾಡಲು ರೈಲುಗಳ ಅಗತ್ಯ ಇರುತ್ತದೆ. ಅದಕ್ಕಾಗಿ ಆರು ಕೋಚ್‌ಗಳನ್ನು ತಯಾರಿಸಲು ಬಿಇಎಂಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಳದಿ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯಂಥ ಐಟಿ ಹಬ್‌ಗಳನ್ನು ಹಾದು ಹೋಗುವುದರಿಂದ ಟ್ರಿಪ್ ಸಂಖ್ಯೆ ಹೆಚ್ಚಾದಂತೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ. ಅದಕ್ಕೆ ಸರಿಯಾಗಿ ಕೋಚ್‌ಗಳನ್ನು ಒದಗಿಸಬೇಕಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.