ADVERTISEMENT

ಬೆಂಗಳೂರು| ಕೊಲೆ, ಕೊಲೆ ಯತ್ನ: ಐವರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 14:36 IST
Last Updated 21 ಜನವರಿ 2026, 14:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಕೇಶವ ನಗರದ 9ನೇ ಕ್ರಾಸ್‌ನಲ್ಲಿ ನಡೆದಿದ್ದ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣದ ಆರು ಅಪರಾಧಿಗಳಿಗೆ ನಗರದ 63ನೇ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳವಾರ ಆದೇಶಿಸಿದೆ.

ಕಡ್ಡಿಬಾಬು ಅಲಿಯಾಸ್‌ ಬಾಬು, ಚಿನ್ನಪ್ಪ ಅಲಿಯಾಸ್‌ ಚಿನ್ನಿ, ಬುರುಗಪ್ಪ ಅಲಿಯಾಸ್ ಬುರುಗ, ಅಂಥೋಣಿ ಸ್ವಾಮಿ, ಕೆ.ಶ್ರೀನಿವಾಸ ಅಲಿಯಾಸ್ ಕೋಟೆ ಗಾರ್ಡನ್‌ ಸೀನಪ್ಪ ಶಿಕ್ಷೆಗೆ ಒಳಗಾದ ಅಪರಾಧಿಗಳು.

ADVERTISEMENT

ಇದೇ ಪ್ರಕರಣದಲ್ಲಿ ರಮೇಶ್‌ ಅಲಿಯಾಸ್ ಆಂಧ್ರ ರಮೇಶ್‌ ಎಂಬಾತನೂ ಕೃತ್ಯದಲ್ಲಿ ಭಾಗಿ ಆಗಿರುವುದು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಿದ್ದು, ಆತ ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದಾನೆ.

ಆರು ಮಂದಿ ಅಪರಾಧಿಗಳು ಸೇರಿಕೊಂಡು 2011ರ ಮಾರ್ಚ್‌ 21ರಂದು ಬಸವರಾಜ್‌ ಎಂಬುವರನ್ನು ಕೊಲೆ ಮಾಡಿದ್ದರು. ಅಶ್ವಥ್‌ನಾರಾಯಣ ಹಾಗೂ ರಾಜು ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ಅಪರಾಧಿಗಳಿಗೆ ಹಲ್ಲೆ ನಡೆಸಿದ್ದರಿಂದ ಅಶ್ವಥ್‌ ನಾರಾಯಣ ಹಾಗೂ ರಾಜು ಅವರು ಗಂಭೀರವಾಗಿ ಗಾಯಗೊಂಡಿದ್ದರೆ, ಬಸವರಾಜ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿ ವಿ.ಕೆ.ವಾಸುದೇವ್‌ ಅವರು (ಪ್ರಸ್ತುತ ಅವರು ಮಡಿವಾಳ ಉ‍ಪ ವಿಭಾಗದ ಎಸಿಪಿ) ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಅಪರಾಧಿಗಳಿಗೆ ಜ.20ರಂದು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಬಿ.ವೆಂಟಕರಾವ್‌ ಹಾಗೂ ವಕೀಲೆ ರಾಖಿ ವೈದ್ಯ ಅವರು ವಾದ ಮಂಡನೆ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.