ADVERTISEMENT

ಬ್ಲಾಕ್ ಸ್ಪಾಟ್‌ ದುರಸ್ತಿ ಬಳಿಕ ಅಪಘಾತ ಇಳಿಕೆ: ಗೃಹ ಸಚಿವ ಜಿ.ಪರಮೇಶ್ವರ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 21:06 IST
Last Updated 5 ಫೆಬ್ರುವರಿ 2026, 21:06 IST
ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ವಸ್ತುಪ್ರದರ್ಶದಲ್ಲಿದ್ದ ಬೈಕ್‌ ಮೇಲೆ ಕುಳಿತು ಪರಿಶೀಲಿಸಿದ ಗೃಹ ಸಚಿವ ಜಿ.ಪರಮೇಶ್ವರ. ರಾಮಲಿಂಗಾರೆಡ್ಡಿ, ಸಲೀಂ, ಸೀಮಾಂತ್ ಕುಮಾರ್ ಸಿಂಗ್‌ ಇದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ವಸ್ತುಪ್ರದರ್ಶದಲ್ಲಿದ್ದ ಬೈಕ್‌ ಮೇಲೆ ಕುಳಿತು ಪರಿಶೀಲಿಸಿದ ಗೃಹ ಸಚಿವ ಜಿ.ಪರಮೇಶ್ವರ. ರಾಮಲಿಂಗಾರೆಡ್ಡಿ, ಸಲೀಂ, ಸೀಮಾಂತ್ ಕುಮಾರ್ ಸಿಂಗ್‌ ಇದ್ದಾರೆ.    

ಬೆಂಗಳೂರು: ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತ ವಲಯಗಳನ್ನು (ಬ್ಲಾಕ್‌ ಸ್ಪಾಟ್‌) ಗುರುತಿಸಿ, ದುರಸ್ತಿಪಡಿಸಿದ ಬಳಿಕ ಅಪಘಾತಗಳ ಸಂಖ್ಯೆ ಕಡಿಮೆ ಆಯಿತು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ನಡೆದ ‘ಇ-ಡಿಎಆರ್ ಅನುಷ್ಠಾನ ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ– 2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಪ್ರಾರಂಭಿಸಿದ ಎರಡು ತಿಂಗಳಿಗೆ 120 ಮಂದಿ ಮೃತಪಟ್ಟರು. ಸಹಜವಾಗಿ ಆತಂಕ ಮೂಡಿಸಿತ್ತು. ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, 100 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಜಾಗೃತಿ ಸಂದೇಶ ಅಳವಡಿಸಿದರು. ಇದಾದ ಬಳಿಕ ಅಪಘಾತಗಳ ಸಂಖ್ಯೆ ಕಡಿಮೆ ಆಯಿತು ಎಂದು ತಿಳಿಸಿದರು.

ADVERTISEMENT

ದೇಶದಲ್ಲಿ ವರ್ಷಕ್ಕೆ 4.70 ಲಕ್ಷ ಅಪಘಾತ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದಲ್ಲಿ 43 ಸಾವಿರ ಅಪಘಾತ ಪ್ರಕರಣಗಳು ವರದಿಯಾಗಿವೆ. ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ನಗರದಲ್ಲಿ 500 ಜಂಕ್ಷನ್‌ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಕೃತಕ ಬುದ್ದಿಮತ್ತೆ (ಎ.ಐ) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆಂಗಳೂರು ನಗರವನ್ನು ಕಮಾಂಡ್ ಸೆಂಟರ್‌ನಿಂದಲೇ ಗಮನಿಸಬಹುದು.‌ ಪ್ರತಿ ಜಂಕ್ಷನ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ಕಮಾಂಡ್ ಸೆಂಟರ್‌ನಿಂದ ನೋಡಬಹುದು.‌ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿರುವ ಪರಿಣಾಮ ಉಲ್ಲಂಘನೆ ಮತ್ತು ಅಪಘಾತಗಳು ಕಡಿಮೆಯಾಗಿವೆ ಎಂದರು.

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಘೋಷಣೆ ಮಾಡಿದ್ದು, ಮಾದಕ ವಸ್ತು ಬಳಕೆಯಿಂದಾಗುವ ದುಷ್ಪರಿಣಾಮ, ಹಾನಿಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ರಾಜ್ಯದ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. 

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ಅವರು ರಸ್ತೆ ಸುರಕ್ಷತೆ ಜಾಗೃತಿ ಮತ್ತು ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಕುರಿತು ಉಪನ್ಯಾಸ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಹೈಕೋರ್ಟ್‌ ನ್ಯಾಯಮೂರ್ತಿ ಅನು ಶಿವರಾಮನ್, ರಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಡ್ವೊಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಐಜಿ–ಡಿಜಿಪಿ ಸಲೀಂ, ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಭಾಗವಹಿಸಿದ್ದರು. 

ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ವಸ್ತು ಪ್ರದರ್ಶನ, ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ, ಚರ್ಚೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆದವು.

ಇ–ಡಿಎಆರ್ ಅನುಷ್ಠಾನ

ರಸ್ತೆ ಅಪಘಾತಗಳ ಕುರಿತ ತನಿಖೆಯನ್ನು ತಾಂತ್ರಿಕವಾಗಿ ಬಲಪಡಿಸುವ ಹಾಗೂ ಸಂತ್ರಸ್ತರಿಗೆ ವಿಮಾ ಪರಿಹಾರ ಮತ್ತು ತ್ವರಿತ ನ್ಯಾಯ ಒದಗಿಸುವ ಇ–ಡಿಎಆರ್‌ (ಎಲೆಕ್ಟ್ರಾನಿಕ್‌ ಡಿಟೈಲ್ಡ್ ಆ್ಯಕ್ಸಿಡೆಂಟ್‌ ರಿಪೋರ್ಟ್‌) ಎಂಬ ಡಿಜಿಟಿಲ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಇ–ಡಿಎಆರ್‌ ಡಿಜಿಟಲ್ ಪೋರ್ಟಲ್ ಪೊಲೀಸ್ ವಿಮಾ ಕಂಪನಿಗಳು ಮತ್ತು ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಗಳ ನಡುವೆ ನೈಜ ಸಮಯದಲ್ಲಿ ಮಾಹಿತಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ವಿಳಂಬವಿಲ್ಲದೆ ಸಂತ್ರಸ್ತರಿಗೆ ಪರಿಹಾರ ದೊರೆಯುತ್ತದೆ. ಬೆಂಗಳೂರು ನಗರದ 53 ಸಂಚಾರ ಪೊಲೀಸ್ ಠಾಣೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

2 ಲಕ್ಷಕ್ಕೂ ಹೆಚ್ಚು ಅಪಘಾತ: ನ್ಯಾ. ವಿಭು

2019 ರಿಂದ 2025ರ ಅವಧಿಯಲ್ಲಿ ರಾಜ್ಯದಲ್ಲಿ 213000ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ್ದು 60 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಶೇಕಡ 28ರಷ್ಟು ಪಾದಚಾರಿಗಳೇ ಬಲಿಯಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಎಂದು ಹೇಳಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2026 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ‘ಹೋದ ಜೀವವನ್ನು ಮರಳಿ ತರಲು ಯಾವುದೇ ನ್ಯಾಯಾಂಗ ಪ್ರಕ್ರಿಯೆಗೂ ಸಾಧ್ಯವಿಲ್ಲ. ಆದ್ದರಿಂದ ಅಪಘಾತ ತಡೆಗಟ್ಟುವುದೇ ನಮ್ಮ ಮೊದಲ ಆದ್ಯತೆಯಾಗಬೇಕು’ ಎಂದರು.

ರಾಜ್ಯದ ವರ್ಚುವಲ್ ಕೋರ್ಟ್ ಮೂಲಕ ಇದುವರೆಗೆ 133069 ಸಂಚಾರ ಚಲನ್‌ಗಳನ್ನು ವಿಲೇವಾರಿ ಮಾಡಿದ್ದು ₹115 ಕೋಟಿಗೂ ಹೆಚ್ಚು ದಂಡ ಸಂಗ್ರಹವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.