ADVERTISEMENT

ಬೆಂಗಳೂರು ನಡಿಗೆ: ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಡಿಕೆಶಿ ಎದುರು ಮಹಿಳೆ ಸುಳ್ಳು!

ಲಂಚ ಕೇಳಿದ ಆರ್‌ಒ: ಕ್ರಮಕ್ಕೆ ಡಿಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 11:13 IST
Last Updated 18 ಅಕ್ಟೋಬರ್ 2025, 11:13 IST
   

ಬೆಂಗಳೂರು: ಖಾತಾ ಮಾಡಿಸಲು ಲಂಚ ಕೇಳುತ್ತಿದ್ದ ಕಂದಾಯ ಅಧಿಕಾರಿ (ಆರ್‌ಒ) ವಿರುದ್ಧ ಕ್ರಮ ಕೈಗೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೂಚಿಸಿದರು.

ಕೆ.ಆರ್. ಪುರಂ ಟಿ.ಸಿ. ಪಾಳ್ಯದ ವೆಂಗಯ್ಯ ಪಾರ್ಕ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ  ‘ಬೆಂಗಳೂರು ನಡಿಗೆ’ ಅಭಿಯಾನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆ ಜನರು ನೀಡಿದ ದೂರಿನಂತೆ ಈ ಸೂಚನೆ ನೀಡಿದರು.

‘ಖಾತಾ ಮಾಡಿಸಲು ಕಂದಾಯ ಅಧಿಕಾರಿಗಳು ಹೆಚ್ಚು ಲಂಚ ಕೇಳುತ್ತಾರೆ. ಈ ವಿಚಾರವಾಗಿ ಬಿಬಿಎಂಪಿ ಕಮಿಷನರ್ ಬಳಿ ದೂರು ನೀಡಿದ್ದೇನೆ’ ಎಂದು ಸ್ಥಳೀಯರಾದ ಸುಲ್ತಾನ್ ಮಿರ್ಜಾ ದೂರಿದರು. ‘ಅಧಿಕಾರಿಯ ಹೆಸರು ಹೇಳಿ. ಇಲ್ಲಿಯೇ ಅಮಾನತು ಮಾಡುತ್ತೇನೆ’ ಎಂದು ಶಿವಕುಮಾರ್‌ ಭರವಸೆ ನೀಡಿದರು. ‘ಬಸವರಾಜ್ ಅವರು ₹ 10–15 ಸಾವಿರ ಬೇಡಿಕೆ ಇಡುತ್ತಿದ್ದಾರೆ. ಎರಡು ತಿಂಗಳಿನಿಂದ ಅಲೆದಾಡಿಸುತ್ತಿದ್ದಾರೆ. ಹೊರಮಾವು ಕಚೇರಿಗೆ ಕಳುಹಿಸುತ್ತಾರೆ. ಅಲ್ಲಿ ಹೋದರೆ ವಿಜಿನಾಪುರ ಬಿಬಿಎಂಪಿ ಕಚೇರಿಗೆ ಕಳುಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಲಂಚ ಬೇಡಿಕೆ ವಿಚಾರವಾಗಿ ಶೀಘ್ರ ಪರಿಶೀಲನೆ ನಡೆಸಿ ಶನಿವಾರ ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಿ’ ಎಂದು ಪಾಲಿಕೆ ಆಯುಕ್ತರಿಗೆ ಉಪ ಮುಖ್ಯಮಂತ್ರಿ ಸೂಚಿಸಿದರು. ‘ಏಜೆಂಟ್‌ ವಿರುದ್ದ ಪೊಲೀಸ್ ‌ಇಲಾಖೆ ಮತ್ತು ಪಾಲಿಕೆ ಕ್ರಮ‌ ತೆಗೆದುಕೊಳ್ಳಲಿದೆ’ ಎಂದು ತಿಳಿಸಿದರು.

‘ಗೃಹಲಕ್ಷ್ಮೀ’ ಬಗ್ಗೆ ಸುಳ್ಳು: ಆರು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಮಹಿಳೆಯೊಬ್ಬರು ದೂರಿದರು. ‘ಆರು ತಿಂಗಳಿನಿಂದ ಬಾಕಿ ಇಲ್ಲ. ಅಧಿಕಾರಿಗಳಿಂದ ತಪ್ಪಾಗಿರಬೇಕು. ಇಲ್ಲವೇ ನಿಮ್ಮ ಆರೋಪ ಸುಳ್ಳಾಗಿರಬೇಕು’ ಎಂದು ಹೇಳಿದ ಶಿವಕುಮಾರ್‌ ಅವರು ತಮ್ಮ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್‌ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. 

‘ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಈ ತಿಂಗಳು ಸಂದಾಯವಾಗಿದೆ. ಈ ಮಹಿಳೆಯ ವಿಚಾರದಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ ಪರಿಶೀಲಿಸಿ, ಅದನ್ನು ಬಗೆಹರಿಸಲಾಗುವುದು’ ಎಂದು ಅಧಿಕಾರಿಯಿಂದ ಮಾಹಿತಿ ಬಂತು. ದೂರು ನೀಡಿದ ಮಹಿಳೆಯ ಮೊಬೈಲ್ ಅನ್ನು ರಾಜೇಂದ್ರ ಪ್ರಸಾದ್ ಪರಿಶೀಲಿಸಿದಾಗ ಅಕ್ಟೋಬರ್‌ 3ರಂದು ಜುಲೈ ತಿಂಗಳ ಗೃಹಲಕ್ಷ್ಮೀ ಹಣ ಪಾವತಿಯಾಗಿರುವ ಸಂದೇಶ ಮೊಬೈಲ್‌ನಲ್ಲಿ ಇತ್ತು. ಅದನ್ನು ಶಿವಕುಮಾರ್‌ ಅವರು ಸಾರ್ವಜನಿಕರ ಮುಂದೆಯೇ ಓದಿದರು.

‘ಈ ಮಹಿಳೆ ಆರೋಪ ಮಾಡಿದನ್ನು ನೋಡಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ತೀರ್ಮಾನಿಸಿದ್ದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ತರಾಟೆಗೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ, ಸದ್ಯ ಅವರು ಫೋನ್ ಕರೆ ಸ್ವೀಕರಿಸಲಿಲ್ಲ. ಗೃಹಲಕ್ಷ್ಮಿ ಹಣ ಆರು ತಿಂಗಳಿನಿಂದ ಪಾವತಿಯಾಗಿಲ್ಲ ಎಂದು ಈ ಮಹಿಳೆ ಮಾಡಿರುವ ಆರೋಪ ಸುಳ್ಳು. ಜುಲೈವವರೆಗಿನ ಹಣ ಸಂದಾಯವಾಗಿದ್ದು, ಆಗಸ್ಟ್ ತಿಂಗಳ ಹಣ ಪಾವತಿ ಪ್ರಕ್ರಿಯೆಯಲ್ಲಿದೆ’ ಎಂದು ತಿಳಿಸಿದರು.

ಬೆದರಿಕೆ ಹಾಕಿದರೆ ಕಾನೂನು ಕ್ರಮ: ‘ನಾನು ಎರಡು ವರ್ಷಗಳಿಂದ ನನ್ನ ನಿವೇಶನದಲ್ಲಿ ಮನೆ ಕಟ್ಟಿದ್ದೇನೆ. ಆ ಜಾಗ ಖರೀದಿ ಮಾಡಬೇಕೆಂದು ಕೊಂಡಿದ್ದ ನೆರೆ ಮನೆಯ ವ್ಯಕ್ತಿ ಮಲ್ಲಿಕಾರ್ಜುನ್ ನಾನು ಕಟ್ಟಿರುವ ಮನೆಗೆ ಹೋಗಲು ಬಿಡುತ್ತಿಲ್ಲ. ₹ 10 ಲಕ್ಷ ಹಣ ನೀಡಬೇಕು. ಆಗ ಮಾತ್ರ ಮನೆ ಪ್ರವೇಶಿಸು ಎಂದು ರೌಡಿಗಳು ಹಾಗೂ ಕನ್ನಡಪರ ಸಂಘಟನೆಗಳ ಮೂಲಕ ಬೆದರಿಸುತ್ತಿದ್ದಾರೆ’ ಎಂದು ಎನ್.ಆರ್ ಲೇಔಟಿನ ನಿವಾಸಿ ವಿಘ್ನೇಶ್ ಕಣ್ಣೀರು ಹಾಕಿದರು.

‘ಅವರು ಯಾವ ಸಂಘಟನೆಯವರೇ ಆಗಿರಲಿ, ಕಾಂಗ್ರೆಸ್, ಬಿಜೆಪಿ, ದಳದವರೇ ಆಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ನೀವು ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಂಜೆ ವೇಳೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಅವರು 10 ಲಕ್ಷ ಕೇಳಿದ್ದೇ ಆದರೆ ಮೊದಲು ಲಿಖಿತ ದೂರು ನೀಡು ಕ್ರಮ ಕೈಗೊಳ್ಳುವಂತೆ ನಾನು ನೋಡಿಕೊಳ್ಳುತ್ತೇನೆ. ಒಮ್ಮೆ ದೂರು ಕೊಟ್ಟ ನಂತರ ಅದಕ್ಕೆ ಬದ್ಧವಾಗಿರಬೇಕು’ ಡಿ.ಕೆ. ಶಿವಕುಮಾರ್‌ ಎಂದು ತಿಳಿಸಿದರು.

‘ಪಾಲಿಕೆ ಆಧಿಕಾರಿಗಳು ಆ ಜಾಗಕ್ಕೆ ಹೋಗಿ ಪರಿಸ್ಥಿತಿ ಏನಿದೆ ಎಂದು ಪರಿಶೀಲಿಸಿ, ಹಣ ಕೇಳಿ ಬೆದರಿಕೆ ಹಾಕಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.