ADVERTISEMENT

Bengaluru Fire Tragedy | ಬೆಂಕಿ ದುರಂತ: ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 15:49 IST
Last Updated 18 ಆಗಸ್ಟ್ 2025, 15:49 IST
ಬೆಂಕಿ ದುರಂತ 
ಬೆಂಕಿ ದುರಂತ    

ಬೆಂಗಳೂರು: ಹಲಸೂರು ಗೇಟ್‌ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಸಂಭವಿಸಿದ್ದ ಅಗ್ನಿ ದುರಂತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ತಾಂತ್ರಿಕ ತಜ್ಞರು ತನಿಖೆ ಚುರುಕುಗೊಳಿಸಿದ್ದಾರೆ.

ದುರಂತ ಸಂಭವಿಸಿದ ಕಟ್ಟಡದ ಆಸುಪಾಸಿನಲ್ಲಿರುವ ಸ್ಥಳೀಯರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಅವಘಡ ಸಂಭವಿಸುವುದಕ್ಕೂ ಮೂರು ದಿನಗಳ ಮೊದಲು ಕಟ್ಟಡದ ಹೊರಗಡೆಯಿದ್ದ ವಿದ್ಯುತ್‌ ವೈಯರ್‌ನಲ್ಲಿ ಬೆಂಕಿಯ ಕಿಡಿ  ಕಾಣಿಸುತ್ತಿತ್ತು. ಅದನ್ನು ಮಾಲೀಕರ ಗಮನಕ್ಕೂ ತರಲಾಗಿತ್ತು’ ಎಂಬುದಾಗಿ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮತ್ತೊಂದೆಡೆ ಅವಘಡ ಸಂಭವಿಸಿದಾಗ ನಾಲ್ಕನೇ ಮಹಡಿಯಲ್ಲಿ ವಾಸವಿದ್ದ ಕುಟುಂಬವನ್ನು ಪತ್ತೆ ಹಚ್ಚಲಾಗಿದೆ. ಏಳು ಜನರಿದ್ದ ಮೋಹನ್ ಲಾಲ್ ಎಂಬುವವರ ಕುಟುಂಬದಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಬೆಂಕಿ, ದಟ್ಟವಾದ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕಟ್ಟಡದ ಮೇಲ್ಮಹಡಿಗೆ ಹೊಂದಿಕೊಂಡಂತಿರುವ ಪಕ್ಕದಲ್ಲಿನ ಕಟ್ಟಡಕ್ಕೆ ಜಿಗಿದು ಪಾರಾಗಿರುವುದಾಗಿ ಮೋಹನ್ ಲಾಲ್ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಎಫ್ಎಸ್ಎಲ್ (ವಿಧಿವಿಜ್ಞಾನ  ಪ್ರಯೋಗಾಲಯ) ತಂಡ ಪರಿಶೀಲನೆ ನಡೆಸಿದ್ದು, ಶಾರ್ಟ್ ಸರ್ಕಿಟ್‌ ಅಥವಾ ಅಡುಗೆ ಅನಿಲ ಸೋರಿಕೆಯಿಂದ ಅವಘಡ ಸಂಭವಿಸಿದೆಯಾ ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಆಗಸ್ಟ್ 16ರಂದು ಬೆಳಗಿನ ಜಾವ 3.30ರ ಸುಮಾರಿಗೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಸಂಭವಿಸಿದ ಅವಘಡದಲ್ಲಿ ರಾಜಸ್ಥಾನದ ಐವರು ಸಜೀವದಹನವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.