
ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದ ಪ್ರಮುಖ ಆರು ರಸ್ತೆಗಳಲ್ಲಿ ಸಂಗ್ರಹವಾಗಿದ್ದ ಒಂಬತ್ತು ಟನ್ ಕಸವನ್ನು ಐದು ಗಂಟೆಗಳಲ್ಲಿ ನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಸೆಂಟ್‌ಮಾರ್ಕ್ಸ್ ರಸ್ತೆ, ಇಂದಿರಾನಗರ, ರೆಸಿಡೆನ್ಸಿ ರಸ್ತೆಗಳಲ್ಲಿ ಶುಕ್ರವಾರ ಮುಂಜಾನೆ 3ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗಿದೆ ಎಂದು ನಗರ ಪಾಲಿಕೆಯ ಹೆಚ್ಚುವರಿ ಅಭಿವೃದ್ಧಿ ಆಯುಕ್ತ ದಲ್ಜಿತ್ ಕುಮಾರ್ ತಿಳಿಸಿದರು.
ಮದ್ಯದ ಬಾಟಲ್, ಚಪ್ಪಲಿ, ಶೂ, ಬಟ್ಟೆಗಳು, ಊಟ, ತಿಂಡಿ, ತಿನಿಸುಗಳ ಪ್ಲೇಟ್, ಪ್ಲಾಸ್ಟಿಕ್ ತ್ಯಾಜ್ಯ, ಸಿಗರೇಟ್ ಇನ್ನಿತರೆ ತ್ಯಾಜ್ಯ ಸೇರಿ ಸುಮಾರು ಒಂಬತ್ತು ಟನ್ ಕಸವನ್ನು ತೆರವುಗೊಳಿಸಲಾಗಿದೆ. ರಾತ್ರಿ ಸಮಯದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿ, ಆಟೊ ಟಿಪ್ಪರ್ ಚಾಲಕರ ಕಾರ್ಯ ಶ್ಲಾಘನಾರ್ಹ ಎಂದರು.
110 ಪೌರ ಕಾರ್ಮಿಕರು, ಮೂವರು ಕಿರಿಯ ಆರೋಗ್ಯ ಪರಿವೀಕ್ಷಕರು, 10 ಆಟೊ ಟಿಪ್ಪರ್, ಮೂರು ಪ್ರೆಷರ್ ಜೆಟ್ ವಾಟರ್ ಕ್ಲೀನಿಂಗ್ ಯಂತ್ರಗಳನ್ನು ಸ್ವಚ್ಛತಾ ಕಾರ್ಯದಲ್ಲಿ ಬಳಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.