ADVERTISEMENT

ಹಾವುಗಳ ನೆಲೆಯಾದ ಲಲಿತಕಲಾ ಅಕಾಡೆಮಿಯ ಗ್ರಾಫಿಕ್ ಸ್ಟುಡಿಯೊ!

ಆರು ವರ್ಷಗಳಾದರೂ ಪೂರ್ಣಗೊಳ್ಳದ ಕಾಮಗಾರಿ *ಗಿಡಗಂಟಿಗಳಿಂದ ಆವರಿಸಿಕೊಂಡ ಕಟ್ಟಡ

ವರುಣ ಹೆಗಡೆ
Published 6 ಅಕ್ಟೋಬರ್ 2023, 4:25 IST
Last Updated 6 ಅಕ್ಟೋಬರ್ 2023, 4:25 IST
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಗ್ರಾಫಿಕ್ ಸ್ಟುಡಿಯೊ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದು -ಪ್ರಜಾವಾಣಿ ಚಿತ್ರ/ ರಂಜು ಪಿ
ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಗ್ರಾಫಿಕ್ ಸ್ಟುಡಿಯೊ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಕಲಾವಿದರ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕಾಗಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗ್ರಾಫಿಕ್ ಸ್ಟುಡಿಯೊ ಪಾಳುಬಿದ್ದಿದ್ದು, ಹಾವುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.  

ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಈ ಕಟ್ಟಡ, ಆರು ವರ್ಷಗಳು ಕಳೆದರೂ ಕಾರ್ಯಾರಂಭ ಮಾಡಿಲ್ಲ. ಅನುದಾನದ ಕೊರತೆಯಿಂದಾಗಿ ಸ್ಟುಡಿಯೊಕ್ಕೆ ಅಂತಿಮ ಸ್ಪರ್ಶ ಸಾಕಾರವಾಗಲಿಲ್ಲ. ಕಾಮಗಾರಿ ಸ್ಥಗಿತಗೊಂಡು ವರ್ಷವೇ ಕಳೆದಿದೆ. ಹೀಗಾಗಿ, ಕಟ್ಟಡಕ್ಕೆ ಬೀಗ ಹಾಕಲಾಗಿದೆ. ನಿರ್ವಹಣೆ ಇಲ್ಲದೆಯೇ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು, ಹಾವುಗಳು ನೆಲೆಸಿವೆ. ಇದರಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದೆ.

ಎಂ.ಎಸ್. ಮೂರ್ತಿ ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತು, 2017ರ ಆಗಸ್ಟ್‌ ತಿಂಗಳಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಶಂಕುಸ್ಥಾಪನೆ ನೆರವೇರಿಸಿದ್ದರು. ಐದು ವರ್ಷಗಳಲ್ಲಿ ನಿರ್ಮಾಣವಾದ ಕಟ್ಟಡಕ್ಕೆ ಅಂತಿಮ ಸ್ಪರ್ಶ ಒದಗಿಸಲು ಅನುದಾನದ ಕೊರತೆ ಎದುರಾಗಿತ್ತು. ₹ 1 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಅಕಾಡೆಮಿಯ ಹಿಂದಿನ ಅಧ್ಯಕ್ಷ ಡಿ. ಮಹೇಂದ್ರ ಅವರು ಇಲಾಖೆಗೆ ಪತ್ರಗಳ ಮೂಲಕ ಒತ್ತಾಯಿಸಿದ್ದರು. ಚುನಾವಣೆ ಹೊಸ್ತಿಲಲ್ಲಿ ಅನುದಾನಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ಹಣ ಬಿಡುಗಡೆಯಾಗದಿದ್ದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.   

ADVERTISEMENT

ಒಳಾಂಗಣ ವಿನ್ಯಾಸ ಬಾಕಿ: ಗ್ರಾಫಿಕ್ ಸ್ಟುಡಿಯೊದ ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ಸರ್ಕಾರವು 2017ರಲ್ಲಿ ₹3.31 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಬಳಿಕ ಅನುದಾನ ಬಿಡುಗಡೆ ಆಗಿರಲಿಲ್ಲ. 2020ರಲ್ಲಿ ಸರ್ಕಾರ ₹ 3.33 ಕೋಟಿ ಬಿಡುಗಡೆ ಮಾಡಿತ್ತು. 2020ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸಂಸ್ಕೃತಿ ಇಲಾಖೆ ಸೂಚಿಸಿತ್ತು. ಆದರೆ, ಕೋವಿಡ್‌ನಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿತ್ತು. ಕಳೆದ ವರ್ಷಾಂತ್ಯಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಒಳಾಂಗಣ ವಿನ್ಯಾಸ ಪೂರ್ಣಗೊಳ್ಳದಿದ್ದರಿಂದ ಇದು ಕಲಾವಿದರಿಗೆ ದೊರೆಯದಾಗಿದೆ. 

25 ಕಲಾವಿದರು ಕೆಲಸ ಮಾಡುವಷ್ಟು ಅವಕಾಶ ಈ ಸ್ಟುಡಿಯೊ ಹೊಂದಿದೆ. ಲಿಥೋಗ್ರಾಫಿ ಸೇರಿ ಕಲೆಗೆ ಸಂಬಂಧಿಸಿದ ವಿವಿಧ ಯಂತ್ರಗಳ ಅಳವಡಿಕೆಯನ್ನು ಯೋಜನೆ ಒಳಗೊಂಡಿತ್ತು. ಪ್ರದರ್ಶನ ಗ್ಯಾಲರಿಯಲ್ಲಿ ಲಲಿತಕಲೆ ಹಾಗೂ ಶಿಲ್ಪಕಲೆಯ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಈ ಕೇಂದ್ರದಿಂದ ಗ್ರಾಫಿಕ್ ಕಲೆಗೆ ವಿಶೇಷ ಮನ್ನಣೆ ದೊರೆಯಲಿದೆ ಎಂದು ಕಲಾವಿದರು ಲೆಕ್ಕಾಚಾರ ಹಾಕಿದ್ದರು. 

ಗ್ರಾಫಿಕ್ ಸ್ಟುಡಿಯೊ ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದಿರುವುದು –ಪ್ರಜಾವಾಣಿ ಚಿತ್ರ/ ರಂಜು ಪಿ
ಕೆ. ಧರಣೀದೇವಿ
ಡಿ. ಮಹೇಂದ್ರ

ಈ ಸ್ಟುಡಿಯೊ ಬಾಗಿಲು ತೆರೆಯುವ ಮೂಲಕ ಕಲಾಕೃತಿಗಳ ರಚನೆ ಮತ್ತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಬೇಕು.‌

।ಡಿ. ಮಹೇಂದ್ರ ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ

ಅನುದಾನದ ಕೊರತೆಯಿಂದ ಗ್ರಾಫಿಕ್ ಸ್ಟುಡಿಯೊ ಕಾಮಗಾರಿ ಸ್ಥಗಿತವಾಗಿತ್ತು. ಈಗ ಅಗತ್ಯ ಅನುದಾನ ಒದಗಿಸಿ ಆದಷ್ಟು ಬೇಗ ಕಾರ್ಯಾರಂಭಿಸಲಾಗುವುದು.

।ಕೆ. ಧರಣೀದೇವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

ಗರಿ ಸ್ಟುಡಿಯೊ ಮಾದರಿ ಗ್ರಾಫಿಕ್ ಸ್ಟುಡಿಯೊವನ್ನು 9846 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಇದು ಎರಡು ಮಹಡಿಯನ್ನು ಹೊಂದಿದೆ. ಇದರ ವಿನ್ಯಾಸವು ದೆಹಲಿಯ ಗರಿ ಸ್ಟುಡಿಯೊ ಮಾದರಿ ಹೊಂದಿದೆ. ನೆಲಮಹಡಿಯಲ್ಲಿ ನಾಲ್ಕು ಸ್ಟುಡಿಯೊಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಸ್ಟುಡಿಯೊದಲ್ಲಿಯೂ ಪಡಸಾಲೆ ಉಗ್ರಾಣ ಶೌಚಾಲಯ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.