ADVERTISEMENT

ಪಿಆರ್‌ಆರ್‌–1 ಯೋಜನೆ ಭೂ ಸ್ವಾಧೀನ: ದರ ನಿಗದಿಗೆ ಅಧಿಕಾರಿಗಳ ತಂಡ ರಚನೆ

ಪಿಆರ್‌ಆರ್‌–1 ಯೋಜನೆ ಭೂ ಸ್ವಾಧೀನ: ಎರಡು ದಿನ ಸಂಧಾನ ಸೂತ್ರದ ಸಭೆ

ಕೆ.ಎಸ್.ಸುನಿಲ್
Published 9 ಆಗಸ್ಟ್ 2025, 23:28 IST
Last Updated 9 ಆಗಸ್ಟ್ 2025, 23:28 IST
BDA Logo SH.jpg
BDA Logo SH.jpg   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಉದ್ದೇಶಿತ ಪೆರಿಫೆರಲ್ ವರ್ತುಲ ರಸ್ತೆ–ಪಿಆರ್‌ಆರ್‌1 (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌) ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನುಗಳಿಗೆ ದರ ನಿಗದಿ ಸಂಬಂಧ ಭೂ ಮಾಲೀಕರೊಂದಿಗೆ ಸಂಧಾನ ಸೂತ್ರದ ಸಭೆ ಆಯೋಜಿಸಿದೆ.

ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಭೂ ಮಾಲೀಕರೊಂದಿಗೆ ಚರ್ಚಿಸಿ ದರ ನಿಗದಿ ಮಾಡಲು ಎಂಟು ಮಂದಿ ವಿಶೇಷ ಭೂಸ್ವಾಧೀನಾಧಿಕಾರಿಗಳ ತಂಡವನ್ನು ಪ್ರಾಧಿಕಾರ ರಚಿಸಿದೆ. ಈ ತಂಡವು ಆಗಸ್ಟ್‌ 11 ಮತ್ತು 12 ರಂದು 66 ಗ್ರಾಮಗಳ ವ್ಯಾಪ್ತಿಯ ಭೂ ಮಾಲೀಕರ ಅಹವಾಲು ಆಲಿಸಲಿದೆ.

ಈ ಹಿಂದೆ ಅಧಿಕಾರಿಗಳು, ಯೋಜನೆಗೆ ಜಮೀನು ಬಿಟ್ಟುಕೊಡಲಿರುವ ಹಳ್ಳಿಗಳಿಗೆ ತೆರಳಿ ರೈತರನ್ನು ಮನವೊಲಿಸಲು ಸಂಧಾನ ಸಭೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನಿಗದಿ ಮಾಡಬೇಕು ಎಂದು ರೈತರು ಪಟ್ಟು ಹಿಡಿದರು. ಆದರೆ, ಪ್ರಾಧಿಕಾರ ಮಾತ್ರ ಭೂ ಸ್ವಾಧೀನ ಕಾಯ್ದೆ 1894ರ ಅನ್ವಯ ಸಂಧಾನ ಸೂತ್ರದಡಿ ಪರಿಹಾರ ನಿಗದಿಗೆ ಆದೇಶ ಮಾಡಿದ್ದರಿಂದ ಭೂ ಪರಿಹಾರ ಕಗ್ಗಂಟಾಗಿಯೇ ಉಳಿಯಿತು.  

ADVERTISEMENT

ಕೆಲವು ಅಧಿಕಾರಿಗಳು ರೈತರನ್ನು ಬೆದರಿಸಿ ಸಂಧಾನ ಸೂತ್ರದ ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಭೂ ಮಾಲೀಕರು ಆರೋಪಿಸಿದರು. ಈ ಬೆಳವಣಿಗೆ ನಡುವೆಯೇ ದರ ನಿಗದಿಗಾಗಿ ವಿಶೇಷ ತಂಡ ರಚಿಸಿದ್ದು, ಜಮೀನು ಮಾಲೀಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗಿದೆ.

ಎಲ್ಲೆಲ್ಲಿ ಸಭೆ?: ಆಗಸ್ಟ್ 11 ರಂದು ಬೆಂಗಳೂರು ಪೂರ್ವದ ವರ್ತೂರು ನಾಡ ಕಚೇರಿ, ಬ್ಯಾಲಕರೆಯ ಗ್ರಾಮ ಪಂಚಾಯಿತಿ ಕಚೇರಿ, ಅವಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ, ಚೀಮಸಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ, ಬಿದರೇನ ಅಗ್ರಹಾರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ, ಶೀಗೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ ಹಾಗೂ ಕಾಡುಗೋಡಿಯ ಬಿಬಿಎಂಪಿ ಕಚೇರಿ ಆವರಣದಲ್ಲಿ ಸಭೆ ನಡೆಯಲಿದೆ.

ಚನ್ನಸಂದ್ರ, ನಾಗೊಂಡನಹಳ್ಳಿ, ಹಗದೂರು, ಖಾನೆಕಂದಾಯ, ವಾಲೇಪುರ, ಬೆಳ್ಳಂದೂರು, ಅಮಾನಿಕೆರೆ, ಸೋರಹುಣಸೆ, ವರ್ತೂರು, ಗುಂಜೂರು, ಕಸಘಟ್ಟಪುರ, ಬ್ಯಾಲಕೆರೆ, ಮಾವಳ್ಳಿಪುರ, ಜಾರಕಬಂಡಕಾವಲು, ಅವಲಹಳ್ಳಿ, ಚೀಮಸಂದ್ರ, ಅವಲಹಳ್ಳಿ, ದೊಡ್ಡಬನಹಳ್ಳಿ, ಬಿದರೇನ ಅಗ್ರಹಾರ, ಕನ್ನಮಂಗಲ, ಶೀಗೇಹಳ್ಳಿ, ಚಿಕ್ಕಬನಹಳ್ಳಿ, ಕುಂಬೇನ ಅಗ್ರಹಾರ, ಕಾಡುಗೋಡಿ, ಕೆಂಪಾಪುರ, ಕಾಳತಮ್ಮನಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣವಾರ, ತಿರುಮೇನಹಳ್ಳಿ, ಚೊಕ್ಕನಹಳ್ಳಿ, ನಗರೇಶ್ವರ ನಾಗೇನಹಳ್ಳಿ, ಕೊತ್ತನೂರು, ಭೈರತಿ, ಚಿಕ್ಕಗುಬ್ಬಿ, ದೊಡ್ಡಗುಬ್ಬಿ ಗ್ರಾಮಗಳ ಜಮೀನು ಮಾಲೀಕರು ಭಾಗವಹಿಸಬಹುದು.

ಆಗಸ್ಟ್ 12 ರಂದು ಯಲಹಂಕದ ಮಿನಿ ವಿಧಾನಸೌಧ, ಹುಸ್ಕೂರು ಕಂದಾಯ ನಿರೀಕ್ಷಕರ ಕಚೇರಿ, ರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ಬಿದರಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಹತ್ತಿರ, ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ನಾಡಕಚೇರಿ, ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಆಲೂರು ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಕೊಡತಿ ಗ್ರಾಮದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಸಭೆ ನಡೆಯಲಿದೆ.

ಹಾರೋಹಳ್ಳಿ, ಕೆಂಚೇನಹಳ್ಳಿ, ವಾಸುದೇವಪುರ, ಮಂಚೇನಹಳ್ಳಿ, ವಡೇರಪುರ, ವೆಂಕಟಾಲ, ಕಟ್ಟಿಗೇನಹಳ್ಳಿ, ಕೋಗಿಲು, ಅಗ್ರಹಾರ, ಗಟ್ಟಿಹಳ್ಳಿ, ಹುಸ್ಕೂರು, ಗುಳಿಮಂಗಲ, ಸಿಂಗೇನ ಅಗ್ರಹಾರ, ಚಿಕ್ಕನಾಗಮಂಗಲ, ಕಮ್ಮಸಂದ್ರ, ಹೆಬ್ಬಗೋಡಿ, ಬಿಳಿಶಾವಲೆ, ರಾಂಪುರ, ವಡೇರಹಳ್ಳಿ, ಅದೂರು, ಬಿದರಹಳ್ಳಿ, ಹಿರಂಡಹಳ್ಳಿ, ಮಾದನಾಯಕನಹಳ್ಳಿ, ಹನುಮಂತಸಾಗರ, ತಮ್ಮೇನಹಳ್ಳಿ, ಕುದುರೆಗೆರೆ, ಕಾಚಮಾರನಹಳ್ಳಿ, ಸೂಲಿಕುಂಟೆ, ಚೊಕ್ಕಸಂದ್ರ, ಕೊಡತಿ, ಅವಲಹಳ್ಳಿ ರೈತರು ಭಾಗವಹಿಸಬಹುದು.

‘ಪಿಆರ್‌ಆರ್ ಯೋಜನೆಗೆ ಜಮೀನು ನೀಡುವ ಭೂ ಮಾಲೀಕರಿಗೆ ‌ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ನೀಡಬೇಕು. ಈ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಆದರೆ, ಬಿಡಿಎ ಇದಕ್ಕೆ ಒಪ್ಪಿಕೊಂಡಿಲ್ಲ. ಹಾಗಾಗಿ ನಮಗೆ ನಿರಾಕ್ಷೇಪಣಾ (ಎನ್ಒಸಿ) ಪತ್ರ ಕೊಡಲಿ’ ಎಂದು ಜಮೀನು ಮಾಲೀಕರು ಆಗ್ರಹಿಸಿದ್ದಾರೆ.

ಸಂಧಾನ ಸೂತ್ರ ಸಭೆಗೆ ವಿರೋಧ

‘ಪಿಆರ್‌ಆರ್‌–1 ಯೋಜನೆಗೆ 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. 18 ವರ್ಷ ಕಳೆದರೂ ಯೋಜನೆ ಅನುಷ್ಠಾನಗೊಂಡಿಲ್ಲ. 2013ರ ಭೂ ಸ್ವಾಧೀನ ಕಾಯ್ದೆ ಅನ್ವಯ ಮಾರುಕಟ್ಟೆ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಬಿಡಿಎ ಹೇಳಿದೆ. ಹಾಗಾಗಿ ಬಿಡಿಎ ಅಧಿಕಾರಿಗಳ ಸಂಧಾನ ಸೂತ್ರದ ಸಭೆಗೆ ನಮ್ಮ ವಿರೋಧ ಇದೆ.

ರಾಜಕಾರಣಿಗಳ ರೆಸಾರ್ಟ್‌ಗೆ ರೈತರನ್ನು ಕರೆಸಿಕೊಂಡು ಬೆದರಿಸಿ ಸಂಧಾನ ಸೂತ್ರದ ಪತ್ರಕ್ಕೆ ಅಧಿಕಾರಿಗಳು ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಸಹಿ ಹಾಕದಿದ್ದರೆ ನ್ಯಾಯಾಲಯಗಳಲ್ಲಿ ಅಲೆದಾಡಿ ಪರಿಹಾರ ಪಡೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಸುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘದ ಅಧ್ಯಕ್ಷ ಮಾವಳ್ಳಿಪುರ ಶ್ರೀನಿವಾಸ್ ತಿಳಿಸಿದ್ದಾರೆ.

‘ಬಿಡಿಎ ತೆಗೆದುಕೊಂಡಿರುವ ತೀರ್ಮಾನ ಕೇಂದ್ರದ 2013ರ ಭೂ ಸ್ವಾಧೀನ ಕಾಯ್ದೆ ನಿಯಮಗಳಿಗೆ ವಿರುದ್ಧವಾಗಿದೆ. ಪಿಆರ್‌ಆರ್ ಯೋಜನೆ ವಿರುದ್ಧ ರೈತರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ವಿಚಾರಣೆ ಹಂತದಲ್ಲಿದೆ’ ಎಂದು ಸಂಘದ ಜಂಟಿ ಕಾರ್ಯದರ್ಶಿ ವೆಂಕಟೇಶ್ ಖಜಾಂಚಿ ನರಸಿಂಮೂರ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.