ADVERTISEMENT

ಪಿ.ಜಿಯಲ್ಲಿ ತಿಗಣೆ ಔಷಧ ಸಿಂಪಡಣೆ: ವಾಸನೆ ತಾಳಲಾರದೇ ಬಿ.ಟೆಕ್ ಪದವೀಧರ ಸಾವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 14:16 IST
Last Updated 23 ಅಕ್ಟೋಬರ್ 2025, 14:16 IST
ಪವನ್‌ 
ಪವನ್‌    

ಬೆಂಗಳೂರು: ಪೇಯಿಂಗ್ ಗೆಸ್ಟ್‌ನಲ್ಲಿ(ಪಿ.ಜಿ) ಸಿಂಪಡಣೆ ಮಾಡಿದ್ದ ತಿಗಣೆ ಔಷಧದ ವಾಸನೆ ತಾಳಲಾರದೇ ಅಸ್ವಸ್ಥಗೊಂಡಿದ್ದ ಬಿ.ಟೆಕ್‌ ಪದವೀಧರ ಮೃತಪಟ್ಟಿರುವ ಘಟನೆ ಎಚ್​ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ವತ್ ನಗರದಲ್ಲಿ ನಡೆದಿದೆ.

ಪವನ್ (21) ಮೃತಪಟ್ಟವರು.

ಆಂಧ್ರಪ್ರದೇಶದ ತಿರುಪತಿಯ ನಿವಾಸಿ ಪವನ್ ಅವರು ಮೂರು ತಿಂಗಳಿಂದ ಅಶ್ವತ್ ನಗರದ ಬಿಎಂಆರ್ ಪಿ.ಜಿಯೊಂದರಲ್ಲಿ ನೆಲಸಿದ್ದರು.

ADVERTISEMENT

ಐ.ಟಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ರಜೆಯ ಹಿನ್ನೆಲೆಯಲ್ಲಿ ಅ.16ರಂದು ಆಂಧ್ರಪ್ರದೇಶಕ್ಕೆ ತೆರಳಿದ್ದರು. ಪಿ.ಜಿಯಲ್ಲಿ ತಿಗಣೆ ಸಮಸ್ಯೆ ಹೆಚ್ಚಾಗಿತ್ತು. ಮಾಲೀಕರು ಪವನ್ ಉಳಿದುಕೊಂಡಿದ್ದ ಕೊಠಡಿಯ ಮಾಸ್ಟರ್ ಕೀ ಬಳಸಿ ಕೊಠಡಿಗೆ ಹೋಗಿ ಔಷಧ ಸಿಂಪಡಿಸಿದ್ದರು. ಊರಿಗೆ ಹೋಗಿದ್ದ ಪವನ್ ಅವರು ಅ.19ರಂದು ಪಿ.ಜಿಗೆ ವಾಪಸ್ ಆಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪಿ.ಜಿ ಮಾಲೀಕರು ತಿಗಣೆ ಔಷಧ ಸಿಂಪಡಣೆ ಮಾಡಿರುವುದು ಪವನ್‌ ಅವರಿಗೆ ಗೊತ್ತಿರಲಿಲ್ಲ. ಅಂದು ರಾತ್ರಿ ನಿದ್ರೆಗೆ ಜಾರಿದ್ದರು. ನಿದ್ರೆ ಮಾಡುವಾಗ ಔಷಧದ ವಾಸನೆ ತಾಳಲಾರದೆ ಅಸ್ವಸ್ಥಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

ಬೌರಿಂಗ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ನಿರ್ಲಕ್ಷ್ಯ ತೋರಿದ ಆರೋಪದಡಿ ಪಿ.ಜಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.