ಬೆಂಗಳೂರು: ಯುವತಿಯರ ಫೋಟೊ, ವಿಡಿಯೊ ತೆಗೆದು ಅಸಭ್ಯ ರೀತಿಯಲ್ಲಿ ಕಾಣುವಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಿಲವರ್ ಹುಸೇನ್ (19) ಬಂಧಿತ ಆರೋಪಿ.
ನಗರದ ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಯುವತಿಯರ ಅನುಮತಿ ಇಲ್ಲದೆ ಅವರಿಗೆ ಗೊತ್ತಾಗದಂತೆ ಫೋಟೊ, ವಿಡಿಯೊ ಸೆರೆ ಹಿಡಿದು, ತನಗೆ ಬೇಕಾದಂತೆ ಎಡಿಟ್ ಮಾಡಿ ಹೆಚ್ಚು ಲೈಕ್‌ಗಳಿಸಲು ಆ ಫೋಟೊಗಳನ್ನು ‘ಬೆಂಗಳೂರು ನೈಟ್‌ಲೈಫ್’ ಎಂದು ಬರೆದು ಬಂಗಾಳಿ ಹಾಡುಗಳನ್ನು ಸೇರಿಸಿ ದಿಲ್ಬರ್ ಜಾನಿ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಅಶೋಕನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಖಚಿತ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಮೊಬೈಲ್ ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಯುವತಿಯ ತುಟಿ ಕಚ್ಚಿದ
ಬೆಂಗಳೂರು: ಮನೆಗೆ ದಿನಸಿ ತರಲು ಹೋಗಿದ್ದ ಯುವತಿಯ ತುಟಿ ಕಚ್ಚಿ ವಿಕೃತಿ ಮೆರೆದ ಆರೋಪಿಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ ಸಂತ್ರಸ್ತೆ ನೀಡಿದ ದೂರು ಆಧರಿಸಿ ಬರ್ಡ್ ಶಾಪ್ ಮಾಲೀಕ ಮರೂಫ್ ಷರೀಫ್ (28) ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಗೋವಿಂದಪುರದಲ್ಲಿ ವಾಸವಾಗಿರುವ ಯುವತಿ ಮನೆಗೆ ದಿನಸಿ ತರಲು ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಈ ವೇಳೆ ಹಿಂಬಾಲಿಸಿದ ಆರೋಪಿ ನಡುರಸ್ತೆಯಲ್ಲಿ ಆಕೆಯ ತುಟ್ಟಿ ಕಚ್ಚಿ ಪರಾರಿಯಾಗಿದ್ದ. ‘ಯುವತಿ ದ್ವಿಚಕ್ರ ವಾಹನದಲ್ಲಿ ಚಲಾಯಿಸಿದ್ದರಿಂದ ರಸ್ತೆಯಲ್ಲಿನ ನೀರು ತನ್ನ ಮೇಲೆ ಬಿದ್ದಿತ್ತು. ಹೀಗಾಗಿ ಕೃತ್ಯವೆಸಗಿದೆ’ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ಧಾನೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.