ಬೆಂಗಳೂರು: ಪುತ್ರಿಯ ಮದುವೆಗೆಂದು ಚಿನ್ನಾಭರಣ ಖರೀದಿಸಿ, ಕಾಟನ್‌ಪೇಟೆಯ ಮನೆಯಲ್ಲಿ ಇಟ್ಟಿದ್ದ ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೊಲೆಯಾದ ಮಹಿಳೆಯ ಸಂಬಂಧಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಬೀದರ್‌ನ ಪುರಂದರ (42) ಹಾಗೂ ಆತನ ಸ್ನೇಹಿತ ಶಿವಪ್ಪ (35) ಬಂಧಿತರು.
ಕಾಟನ್‌ಪೇಟೆಯ ಲತಾ (50) ಅವರನ್ನು ಆರೋಪಿಗಳು ಕೊಲೆ ಮಾಡಿದ್ದರು. ಲತಾ ಅವರು ಬೀದರ್‌ನವರು. ಲತಾ ಅವರ ಸಂಬಂಧಿ ಪುರಂದರ ಸಂಚು ರೂಪಿಸಿ ಕೃತ್ಯ ಎಸಗಿ ಪರಾರಿ ಆಗಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದರು.
ಮೇ 26ರಂದು ಮಧ್ಯಾಹ್ನ ಕಾಟನ್‌ಪೇಟೆಯ ದರ್ಗಾ ರಸ್ತೆಯಲ್ಲಿ ಇರುವ ಮನೆಯೊಂದಕ್ಕೆ ಆರೋಪಿಗಳು ನುಗ್ಗಿ ಲತಾ ಅವರನ್ನು ಕೊಲೆ ಮಾಡಿ 150 ಗ್ರಾಂ. ಚಿನ್ನಾಭರಣ, ₹2 ಲಕ್ಷ ನಗದು ಹಾಗೂ ಒಂದು ಮೊಬೈಲ್ ಫೋನ್ ದರೋಡೆ ಮಾಡಿದ್ದರು.
ಲತಾ ಅವರ ಪತಿ ಪ್ರಕಾಶ್ ಅವರು ಬಟ್ಟೆಯ ಸಗಟು ವ್ಯಾಪಾರ ಮಾಡುತ್ತಿದ್ದು, ಅಂಗಡಿಗೆ ತೆರಳಿದ್ದರು. ಪುತ್ರಿ ಕೆಲಸಕ್ಕೆ ತೆರಳಿದ್ದರು. ಮಗ ಶಾಲೆಗೆ ಹೋಗಿದ್ದ. ಪ್ರಕಾಶ್ ಅವರು ಮನೆಗೆ ಬಂದು ನೋಡಿದಾಗ ಪತ್ನಿಯ ಕೊಲೆ ಆಗಿರುವುದು ಗೊತ್ತಾಗಿತ್ತು. ಪ್ರಕಾಶ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಆರೋಪಿಗಳು ಬೀದರ್‌ನ ರಾಸಾಯನಿಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಪುರಂದರ ಎಂಬಾತ ಲತಾ ಅವರ ಹತ್ತಿರದ ಸಂಬಂಧಿ. ಶಿವಪ್ಪ ಎಂಬಾತ ಪುರಂದರನ ಸ್ನೇಹಿತ. ಇಬ್ಬರೂ ಮದ್ಯಪಾನ, ಬೆಟ್ಟಿಂಗ್ ಚಟಕ್ಕೆ ದಾಸರಾಗಿದ್ದರು. ಅಪಾರ ಸಾಲ ಮಾಡಿಕೊಂಡಿದ್ದರು. ಜೊತೆಗೆ ರೈಸ್ ಪುಲ್ಲಿಂಗ್ ದಂಧೆಯಲ್ಲೂ ತೊಡಗಿಸಿಕೊಂಡಿದ್ದರು. ಲತಾ ಬಳಿ ಹಣ ಹಾಗೂ ಚಿನ್ನಾಭರಣ ಇರುವುದು ಪುರಂದರನಿಗೆ ತಿಳಿದಿತ್ತು. ತನ್ನ ಸ್ನೇಹಿತನ ಜತೆಗೆ ಸೇರಿಕೊಂಡು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಬೆಳಿಗ್ಗೆ ಮನೆಗೆ ಬಂದಾಗ ಸಂಬಂಧಿಗಳು ಬಂದಿದ್ದಾರೆ ಎಂದು ಲತಾ ಅವರು ತಿಂಡಿ ನೀಡಿ ಸತ್ಕರಿಸಿದ್ದರು. ಆಗ ಕೊಲೆ ಮಾಡಲು ಧೈರ್ಯವಿಲ್ಲದೆ ವಾಪಸ್ ತೆರಳಿದ್ದರು. ಸ್ವಲ್ಪ ಹೊತ್ತಿನ ನಂತರ ಮಾವಿನಹಣ್ಣು ಕೊಡುವ ನೆಪದಲ್ಲಿ ಮತ್ತೆ ಮನೆಗೆ ಬಂದು ಲತಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.
150 ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ಸೆರೆ
ಕಾಟನ್‍ಪೇಟೆಯಿಂದ ಮೆಜೆಸ್ಟಿಕ್‍ವರೆಗೆ 150ಕ್ಕೂ ಹೆಚ್ಚು ಸಿ.ಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಿ ಆರೋಪಿಗಳ ಗುರುತು ಪತ್ತೆ ಮಾಡಲಾಯಿತು ಎಂದು ಪೊಲೀಸರು ಹೇಳಿದರು. ಕೊಲೆಯ ನಂತರ ಆರೋಪಿಗಳು ಕಾಟನ್‍ಪೇಟೆಯಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನಡೆದು ತೆರಳಿ ಕೆಎಸ್‍ಆರ್‌ಟಿಸಿ ಬಸ್ ಹತ್ತಿ ಬೀದರ್‌ಗೆ ಹೋಗಿದ್ದರು. ಮಗಳ ಮದುವೆಯ ಸಿದ್ಧತೆಯಲ್ಲಿದ್ದ ಲತಾ ದಂಪತಿಯು ಹಣ ಹಾಗೂ ಆಭರಣಗಳನ್ನು ಮನೆಯಲ್ಲಿಟ್ಟಿದ್ದ ವಿಚಾರ ತಿಳಿದಿದ್ದ ಆರೋಪಿ ಪುರಂದರ ಅವುಗಳನ್ನು ದೋಚುವ ಉದ್ದೇಶಕ್ಕಾಗಿಯೇ ಕೃತ್ಯ ಎಸಗಿದ್ದ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲತಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.