ADVERTISEMENT

ಬೆಂಗಳೂರು | ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 15:34 IST
Last Updated 27 ಸೆಪ್ಟೆಂಬರ್ 2025, 15:34 IST
ಆದಿತ್ಯ ಅಗರ್‌ವಾಲ್‌
ಆದಿತ್ಯ ಅಗರ್‌ವಾಲ್‌   

ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರ ತಪಾಸಣೆ ನಡೆಸುತ್ತಿದ್ದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ನಿಂದಿಸಿದ್ದಲ್ಲದೇ ಹಲ್ಲೆಗೆ ಯತ್ನಿಸಿದ್ದ ಆರೋಪಿ, ಅಕ್ಷಯ್‌ನಗರದ ನಿವಾಸಿ ಆದಿತ್ಯ ಅಗರ್‌ವಾಲ್‌ (29) ಎಂಬುವವರನ್ನು ಇಂದಿರಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪಿಎಸ್‌ಐ ಡಿ.ಕವಿತಾ ನೇತೃತ್ವದ ಪೊಲೀಸ್ ತಂಡವು ಗುರುವಾರ ರಾತ್ರಿ ಮದ್ಯ ಸೇವಿಸಿ ವಾಹನ ಚಾಲನೆ (ಡಿ.ಡಿ ಕೇಸ್‌) ಮಾಡುತ್ತಿದ್ದವರ ಪತ್ತೆ ಕಾರ್ಯವನ್ನು ನಡೆಸುತ್ತಿತ್ತು. ಈ ವೇಳೆ ಆರೋಪಿಯು ಪೊಲೀಸರನ್ನು ನಿಂದಿಸಿದ್ದರು. ಆರೋಪಿಯನ್ನು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಇಂದಿರಾನಗರದ 100 ಅಡಿ ರಸ್ತೆಯಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಆಲ್ಕೊ ಮೀಟರ್‌ ಬ್ಲೋ ಮಾಡುವಂತೆ ಸೂಚಿಸಿದ್ದರೂ ಸಾರ್ವಜನಿಕರ ಎದುರು ಸಿಬ್ಬಂದಿಗೆ ಆದಿತ್ಯ ಅಗರ್‌ವಾಲ್ ಅವರು ನಿಂದಿಸಿದ್ದರು. ಅಲ್ಲದೇ ಪಿಎಸ್‌ಐ ಮೇಲೆ ಹಲ್ಲೆ ನಡೆಸಲು ಬಂದಿದ್ದರು. ಬಳಿಕ, ಇಂದಿರಾ ನಗರ ಠಾಣೆಗೆ ಕರೆ ಮಾಡಿ ಹೊಯ್ಸಳ ಸಿಬ್ಬಂದಿಯನ್ನು ಸ್ಥಳಕ್ಕೆ ಬರುವಂತೆ ತಿಳಿಸಲಾಯಿತು. ಸ್ಥಳಕ್ಕೆ ಬಂದ ವಾಹನದಲ್ಲಿ ಆರೋಪಿಯನ್ನು ಠಾಣೆಗೆ ಕರೆದೊಯ್ದು ಬಂಧಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.