ADVERTISEMENT

ವರದಿ ಪ್ರಸಾರ ತಡೆಗೆ ಲಂಚದ ಬೇಡಿಕೆ: ಖಾಸಗಿ ವಾಹಿನಿ ಸಿಬ್ಬಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 2:45 IST
Last Updated 8 ಜನವರಿ 2022, 2:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾನಹಾನಿಕರ ಸುದ್ದಿಯೊಂದನ್ನು ಬಿತ್ತರಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ ₹20 ಲಕ್ಷ ಲಂಚ ಪಡೆದಿದ್ದ ‘ಬಿ ಟಿ.ವಿ’ ಸುದ್ದಿ ವಾಹಿನಿಯ ಸಿಬ್ಬಂದಿ ತೀರ್ಥಪ್ರಸಾದ್‌ ಎಂಬಾತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ದೊಡ್ಡಗುಬ್ಬಿ ಮುಖ್ಯ ರಸ್ತೆ ಬಳಿ ವಾಸವಿರುವ ಅನಿಲ್‌ಕುಮಾರ್‌ ಎಂಬುವರು ನೀಡಿರುವ ದೂರಿನ ಮೇಲೆ ಮುಖ್ಯ ಆರೋಪಿ ತೀರ್ಥ‌ಪ್ರಸಾದ್‌ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಕುಮಾರ್‌, ಶಿವಸ್ವಾಮಿ, ರಮೇಶ್‌ ಗೌಡ ಹಾಗೂ ಶ್ರೀಧರ್‌ ಎಂಬುವರನ್ನು ವಿಚಾರಣೆಗೆ ಒಳಪಡಿಸುವುದು ಬಾಕಿ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 384, 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರನ್ನು ಇದೇ 7ರಿಂದ 13ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡುವಂತೆ 11ನೇ ಎ.ಸಿ.ಎಂ.ಎಂ.ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ADVERTISEMENT

‘ಬಂಧಿತ ತೀರ್ಥಪ್ರಸಾದ್‌ ನಮ್ಮ ಸಿಬ್ಬಂದಿಯಲ್ಲ. ಕೆಲ ತಿಂಗಳುಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ’ ಎಂದು ಬಿ ಟಿ.ವಿ ಸುದ್ದಿವಾಹಿನಿಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.