ಪೊಲೀಸ್ ಅಧಿಕಾರಿಗಳ ಜೊತೆ ಬಿ. ದಯಾನಂದ್ (ಮಧ್ಯದಲ್ಲಿ)
ಬೆಂಗಳೂರು: ಬುಧವಾರ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಉಂಟಾದ ಸಾವು–ನೋವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಬಿ. ದಯಾನಂದ್ ಅವರ ಅಮಾನತಿಗೆ ಹಲವು ಬಿಜೆಪಿ ನಾಯಕರು ಸೇರಿದಂತೆ ಸಾರ್ವಜನಿಕರೂ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್, ‘ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ. ‘‘ಅಂಧೇರ್ ನಗರ್ ಕಾ ಚೌಪಟ್ ರಾಜಾ‘‘ ನೆನಪಿಗೆ ಬರುತ್ತಿದ್ದಾನೆ. ಪೋಲಿಸ್ ಅಧಿಕಾರಿಗಳ ಸಲಹೆ ತಿರಸ್ಕರಿಸಿ ಹುಚ್ಚು ಪ್ರಚಾರ ಗಿಟ್ಟಿಸಲು ಹೋಗಿ ಅಮಾಯಕರನ್ನು ಬಲಿ ಕೊಟ್ಟವ, ತಾನು ನುಣಿಚಿಕೊಳ್ಳಲು ಇದೀಗ ದಕ್ಷ ಅಧಿಕಾರಿಗಳನ್ನು ಬಲಿ ಕೊಡಹೊರಟಿರುವುದು ದಿವಾಳಿತನದ ಸ್ಪಷ್ಟ ಉದಾಹರಣೆ. ಇದರಿಂದ ಅಧಿಕಾರಿಗಳ ನೈತಿಕತೆ ಖಚಿತ‘ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಬೆಂಗಳೂರು ಆಯುಕ್ತರಾದ ದಯಾನಂದ್ ಸರ್ ಅಮಾನತು! ಮುಖ್ಯಮಂತ್ರಿಗಳೇ, ನಿಮ್ಮ ಸರಕಾರದ ಪ್ರಚಾರದ ಗೀಳಿನಿಂದಾದ ಆಚಾತುರ್ಯಕ್ಕೆ ಒಬ್ಬ ಪ್ರಾಮಾಣಿಕ, ದಕ್ಷ ಅಧಿಕಾರಿಗೆ ಅಮಾನತು ಬಳುವಳಿ ಕೊಟ್ರಲ್ಲ ಸರ್. ಛೇ..‘ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ.
ನಟ ಹಾಗೂ ಬಿಜೆಪಿ ಸಂಸದ ಜಗ್ಗೇಶ್, ‘ನಾನು ಕಂಡ ಒಬ್ಬ ದಕ್ಷ ಅಧಿಕಾರಿ ದಯಾನಂದ್‌ರವರು. ಹಣ್ಣು ತಿಂದವರು ಯಾರೋ? ಸಿಪ್ಪೆ ಅನ್ಯರಿಗೆ ನೀಡಿ ತಪ್ಪಿತಸ್ಥರ ಮಾಡಿಬಿಟ್ಟರು. ಅಲ್ಲಿಗೆ ನ್ಯಾಯಕ್ಕೆ ಬೆಲೆ ಇಲ್ಲದ ಕಾಲ! What a joke..‘ ಎಂದು ಹೇಳಿದ್ದಾರೆ.
ಅಧಿಕಾರಿಗಳು ತಮಗೆ ತಾವೇ ಕಾರ್ಯಕ್ರಮ ನಡೆಯಲಿ ಅಂತ ಖಂಡಿತವಾಗಿಯೂ ತೀರ್ಮಾನ ಮಾಡಿರಲ್ಲ. ಇದು ರಾಜಕೀಯ ತೀರ್ಮಾನ. ಇದನ್ನು ಯಾರು ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಲಿ. ಅದಕ್ಕೆ ಪೊಲೀಸ್ ಅಧಿಕಾರಿಗಳ್ಯಾಕೆ ಬಲಿ ಆಗಬೇಕು. ದಕ್ಷ ಅಧಿಕಾರಿಗಳು, ಜನಪರ ಕೆಲಸ ಮಾಡುತ್ತಿದ್ದ ದಯನಾಂದ್ ಅವರ ಅಮಾನತು ಆದೇಶ ವಾಪಾಸ್ ಪಡೆಯಿರಿ ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಆಗ್ರಹಿಸಿದ್ದಾರೆ.
ದಯಾನಂದ್ ಅವರ ಜಾಗಕ್ಕೆ ನಿನ್ನೆಯೇ ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್‌ಕುಮಾರ್ ಸಿಂಗ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.