ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಇಬ್ಬರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲಹಂಕ ನ್ಯೂ ಟೌನ್ ನಿವಾಸಿಗಳಾದ ಮಹಮದ್ ಸರ್ಬಾಸ್ ಹಾಗೂ ಹೀರಲ್‌ವ್ಯಾಸಾ ಅವರ ವಿರುದ್ದ ಪ್ರಕರಣ ದಾಖಲಾಗಿದೆ.
ನಿರ್ಬಂಧಿತ ಸ್ಥಳದಲ್ಲಿ ನಿಲುಗಡೆ ಮಾಡಿದ್ದ ವಾಹನಗಳನ್ನು ಯಲಹಂಕ ಸಂಚಾರ ಠಾಣೆಯ ಪೊಲೀಸರು ಪತ್ತೆಹಚ್ಚಿ ಆ ವಾಹನಗಳಿಗೆ ವ್ಹೀಲ್ ಕ್ಯಾಪ್ ಹಾಕುತ್ತಿದ್ದರು. ಆರೋಪಿ ಮಹಮದ್ ಸರ್ಬಾಸ್ ಸಹ ನಿರ್ಬಂಧಿತ ಸ್ಥಳದಲ್ಲಿ ಬೈಕ್ ನಿಲುಗಡೆ ಮಾಡಿದ್ದರು. ವ್ಹೀಲ್ ಕ್ಯಾಪ್ ಹಾಕಲು ಮುಂದಾಗಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಆರೋಪಿಗಳು ನಿಂದಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು ಪೊಲೀಸರಿಗೆ ನಿಂದನೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಡಾಡುತ್ತಿದೆ.
‘ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ‘ವಿಶೇಷ ಉಪಚಾರದ ಪಾಸ್’ಗೆ ಕಾರಣವಾಗಬಹುದು. ಅದುವೇ ನೇರ ಪೊಲೀಸ್ ಠಾಣೆಗೆ. ಎಚ್ಚರಿಕೆ! ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ’ ಎಂದು ‘ಎಕ್ಸ್’ ಖಾತೆಯಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.