ADVERTISEMENT

ಏರುಧ್ವನಿಯಲ್ಲಿ ನಿಂದಿಸಬೇಡಿ, ದೂರು ಬಂದರೆ ಶಿಸ್ತುಕ್ರಮ: ಜಂಟಿ ಕಮಿಷನರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 19:43 IST
Last Updated 20 ಮೇ 2021, 19:43 IST

ಬೆಂಗಳೂರು: ‘ಸಾರ್ವಜನಿಕರ ಜೊತೆ ತಾಳ್ಮೆ ಹಾಗೂ ಸಂಯಮದಿಂದ ಮಾತನಾಡಬೇಕು. ಯಾರೂ ಸಹ ಏರುಧ್ವನಿಯಲ್ಲಿ ನಿಂದಿಸುವುದನ್ನು ಮಾಡಬಾರದು. ಆ ಬಗ್ಗೆ ದೂರುಗಳು ಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರು ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ನಗರದ ಸಂಚಾರ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ಜೊತೆ ಆನ್‌ಲೈನ್‌ನಲ್ಲಿ ಗುರುವಾರ ಸಭೆ ನಡೆಸಿ ಅವರು ಮಾತನಾಡಿದರು.

‘ಜನರ ಜೀವ ರಕ್ಷಣೆ ಹಾಗೂ ಕಾನೂನು ಜಾರಿ ಪೊಲೀಸರ ಕರ್ತವ್ಯ. ಲಾಕ್‌ಡೌನ್‌ ನಿಯಮಗಳನ್ನು ಕಡ್ಡಾಯವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಅನಗತ್ಯ ವಾಹನಗಳ ಓಡಾಟ ನಿಯಂತ್ರಿಸಬೇಕು’ ಎಂದೂ ಸೂಚನೆ ನೀಡಿದರು.

ADVERTISEMENT

‘ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಲಸಿಕೆ ಪಡೆಯದ ಸಿಬ್ಬಂದಿ ಸೋಂಕು ತಗುಲಿ ಮೃತಪಟ್ಟರೆ, ಸರ್ಕಾರದಿಂದ ₹ 30 ಲಕ್ಷ ಪರಿಹಾರ ಮಂಜೂರಾಗುವ ಸಾಧ್ಯತೆ ಕಡಿಮೆ’ ಎಂದೂ ಹೇಳಿದರು.

ಗೌರವ ನೀಡದ ಸಿಬ್ಬಂದಿ ಅಮಾನತು: ‘ಲಾಕ್‌ಡೌನ್‌ ಸಂದರ್ಭದಲ್ಲಿ ಕರ್ತವ್ಯ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ಹಿರಿಯ ಅಧಿಕಾರಿಗಳು ಬಂದರೂ ಗೌರವ ನೀಡದ ಕಾರಣ ಕೆಲ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ನೋಡಿ
ಕೊಳ್ಳಬೇಕು. ತಪಾಸಣೆಗೆ ಬರುವ ಅಧಿಕಾರಿಗಳಿಗೆ ಗೌರವ ನೀಡಬೇಕು’ ಎಂದರು.

‘ಸಂಚಾರ ನಿಯಮ ಪಾಲಿಸಿ’

‘ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗಿರುವುದರಿಂದ ಸಾರ್ವಜನಿಕರ ವಾಹನಗಳ ಭೌತಿಕ ತಪಾಸಣೆಯನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆ, ವೃತ್ತಗಳಲ್ಲಿರುವ ಕ್ಯಾಮೆರಾ ಹಾಗೂ ಸಿಬ್ಬಂದಿ ಬಳಿಯ ಟ್ಯಾಬ್‌ ಮೂಲಕ ಫೋಟೊ ಸಮೇತ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಮಾಡಿ ದಂಡ ವಿಧಿಸಲಾಗುವುದು’ ಎಂದು ರವಿಕಾಂತೇಗೌಡ ಹೇಳಿದರು.

‘ನಗರದಲ್ಲಿ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ಪ್ರತಿಯೊಬ್ಬರು ಸಂಚಾರ ನಿಯಮಗಳನ್ನು ಪಾಲಿಸಬೇಕು’ ಎಂದೂ ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.