ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ರಜಾ ದಿನವಾದ ಭಾನುವಾರವೂ ಮುಂದುವರಿಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ವಾಹನದಟ್ಟಣೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸ್ ವಿಭಾಗದಿಂದ 4,614 ಗುಂಡಿಗಳನ್ನು ಗುರುತಿಸಿ ಆದ್ಯತೆ ಮೇರೆಗೆ ಮುಚ್ಚಲು ಪಾಲಿಕೆಗೆ ಪಟ್ಟಿಯನ್ನು ನೀಡಲಾಗಿತ್ತು. ಅದರಲ್ಲಿ 3,995 ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ 619 ಬಿಬಿಎಂಪಿಯ ಹೊರಭಾಗದಲ್ಲಿವೆ.
ಬಿಬಿಎಂಪಿ 3,287 ರಸ್ತೆಗುಂಡಿಗಳು ಮುಚ್ಚಬೇಕಿದ್ದು, ಉಳಿದ ರಸ್ತೆಗುಂಡಿಗಳು ಜಲಮಂಡಳಿ, ಬೆಸ್ಕಾಂ, ಗೇಲ್, ಮೆಟ್ರೊ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರ ಇಲಾಖೆಗಳಿಗೆ ಬರಲಿವೆ. ಈ ಸಂಬಂಧ ಬಿಬಿಎಂಪಿ ಹಾಗೂ ವಿವಿಧ ಇಲಾಖೆಗಳು ಕೈಜೋಡಿಸಿ ಕಾಲಮಿತಿಯೊಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯ ಎಲ್ಲ 8 ವಲಯಗಳಲ್ಲಿ ಶನಿವಾರ ಹಾಗೂ ಭಾನುವಾರ ರಸ್ತೆ ಗುಂಡಿಗಳನ್ನು ಎಂಜಿನಿಯರ್‌ಗಳ ಉಸ್ತುವಾರಿಯಲ್ಲಿ ಮುಚ್ಚಲಾಗುತ್ತಿದೆ. ಪಾಲಿಕೆಯ ರಸ್ತೆ ಮೂಲ ಸೌಕರ್ಯಗಳ ವಿಭಾಗದಿಂದ ಹೊರ ವರ್ತುಲ ರಸ್ತೆ, ಹೈಡೆನ್ಸಿಟಿ ಕಾರಿಡಾರ್ ಹಾಗೂ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಮೈಸೂರು ರಸ್ತೆ, ಹೊಸಕೆರೆಹಳ್ಳಿ, ಬನಶಂಕರಿ, ಕನಕಪುರ ರಸ್ತೆ, ನಾಗರಭಾವಿ ಇನ್ನಿತರ ರಸ್ತೆಗಳಲ್ಲಿ ಶನಿವಾರ ರಾತ್ರಿ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು. ಮಳೆ ಬಂದಲ್ಲಿ ಕೋಲ್ಡ್ ಮಿಕ್ಸ್, ಇಕೋಫಿಕ್ಸ್ ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮಳೆ ಇಲ್ಲದ ವೇಳೆ ಹಾಟ್ ಮಿಕ್ಸ್ ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.