ಎ.ಐ ಚಿತ್ರ
ಬೆಂಗಳೂರು: ‘ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಗುತ್ತಿಗೆದಾರರು ಕಳಪೆ ಸಾಮಗ್ರಿಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಆರೋಪಗಳಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂಬುದಾಗಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದರು’ ಎಂದು ಮೂಲಗಳು ತಿಳಿಸಿವೆ.
ವಿಧಾನಸೌಧದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್‌ಗಳು ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ’ ಎಂದು ಹೇಳಿವೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಯೋಜನಾ ತಜ್ಞ ಆರ್.ಕೆ. ಮಿಶ್ರಾ, ‘ಬೆಂಗಳೂರು ನಗರದಲ್ಲಿ ₹ 694 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಹಾಗೂ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ 90 ದಿನಗಳ ಕ್ರಿಯಾ ಯೋಜನೆ ಹಾಕಿಕೊಂಡಿದೆ’ ಎಂದು ತಿಳಿಸಿದರು.
‘ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನಾಗಿ ವಿಂಗಡಣೆ ಮಾಡಿರುವ ಸರ್ಕಾರದ ನಿರ್ಧಾರ ಸರಿಯಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಆಯಾ ಪಾಲಿಕೆಯ ಆಯುಕ್ತರು ತ್ವರಿತವಾಗಿ ನಿರ್ಧಾರ ಕೈಗೊಳ್ಳಲು ಇದು ಸಹಕಾರಿ ಆಗಿದೆ’ ಎಂದು ಹೇಳಿದರು.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.