ADVERTISEMENT

ಬೆಂಗಳೂರು | ರಸ್ತೆಯ ತುಂಬೆಲ್ಲಾ ಗುಂಡಿಗಳು: ವಾಹನ ಸವಾರರಿಗೆ ನಿತ್ಯ ನರಕ ಯಾತನೆ

ಪೀಣ್ಯ 2ನೇ ಹಂತದಲ್ಲಿ ಹಾಳಾದ ರಸ್ತೆಗಳು,

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 23:54 IST
Last Updated 20 ಸೆಪ್ಟೆಂಬರ್ 2025, 23:54 IST
ರಾಜಗೋಪಾಲನಗರ ಮುಖ್ಯರಸ್ತೆಯಲ್ಲಿರುವ ಗುಂಡಿಗಳ ಮಧ್ಯೆ ವಾಹನ ಸವಾರರ ಪರದಾಟ
ರಾಜಗೋಪಾಲನಗರ ಮುಖ್ಯರಸ್ತೆಯಲ್ಲಿರುವ ಗುಂಡಿಗಳ ಮಧ್ಯೆ ವಾಹನ ಸವಾರರ ಪರದಾಟ   

ಪೀಣ್ಯ ದಾಸರಹಳ್ಳಿ: ರಸ್ತೆಗಳ ತುಂಬೆಲ್ಲ ಗುಂಡಿಗಳು, ಮಳೆ ಬಂದರೆ ಆ ಗುಂಡಿಗಳಲ್ಲಿ ಕೆಸರು, ಬಿಸಿಲಿದ್ದರೆ ರಸ್ತೆಯ ತುಂಬೆಲ್ಲ ದೂಳು... ಇಂತಹ ರಸ್ತೆಗಳಲ್ಲೇ ನಿತ್ಯವೂ ಸಾವಿರಾರು ವಾಹನ ಸವಾರರು ಪರದಾಡಿಕೊಂಡು ಸಂಚರಿಸುತ್ತಿದ್ದಾರೆ.

ಪೀಣ್ಯ 2ನೇ ಹಂತ, ದೊಡ್ಡಣ್ಣ ಕೈಗಾರಿಕಾ ಪ್ರದೇಶ, ಹೆಗ್ಗನಹಳ್ಳಿ ಕ್ರಾಸ್, ಪೀಣ್ಯ ಕೈಗಾರಿಕಾ ಪ್ರದೇಶ, ಸುಂಕದಕಟ್ಟೆ, ಲಗ್ಗೆರೆ ರಸ್ತೆಗಳ ಪರಿಸ್ಥಿತಿ ಇದು.

ರಾಜಗೋಪಾಲನಗರ ಮುಖ್ಯರಸ್ತೆಯಲ್ಲಿ ಗುಂಡಿಗಳ ನಡುವೆ ರಸ್ತೆ ಹುಡುಕುವಂತಾಗಿದೆ. ಒಂದು ಗುಂಡಿ ತಪ್ಪಿಸಿ ಮುಂದೆ ಸಾಗುವಷ್ಟರಲ್ಲಿ ಮತ್ತೊಂದು ಗುಂಡಿ ಎದುರಾದುವುದರಿಂದ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.

ADVERTISEMENT

‘ದ್ವಿಚಕ್ರ ವಾಹನ ಸವಾರರ ಬೆನ್ನು ಮೂಳೆ ಮುರಿಯಲಿ, ಗುಂಡಿಗಳಲ್ಲಿ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳಲಿ, ಅದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ’ ಎಂದು ನಾಗರಿಕರು ದೂರುತ್ತಿದ್ದಾರೆ.

‘ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡರೆ, ಅವುಗಳನ್ನು ತಕ್ಷಣ ಮುಚ್ಚಬೇಕಿರುವುದು ಸಂಬಂಧಪಟ್ಟ ವಾರ್ಡ್‌ನ ಎಇ, ಎಇಇಗಳ ಜವಾಬ್ದಾರಿ. ಅವರು ಈ ಹೊಣೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ನಗರ ಪಾಲಿಕೆ ಹೇಳಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಗುಂಡಿ ಬಿದ್ದು ಹಾಳಾಗಿರುವ ರಸ್ತೆಯಲ್ಲಿ ಪೊಟರೆ ಕಲ್ಲುಗಳ ಮೇಲೆ ವಾಹನ ಸವಾರರು ಸರ್ಕಸ್ ಮಾಡುತ್ತಾ ಬಿದ್ದು ಗಾಯ ಮಾಡಿಕೊಂಡವರಿದ್ದಾರೆ. ಯಾವಾಗ ರಸ್ತೆ ಸರಿಪಡಿಸುತ್ತಾರೋ ಗೊತ್ತಿಲ್ಲ. ಆದರೆ ಪ್ರತಿನಿತ್ಯ ಈ ರಸ್ತೆಗಳಲ್ಲಿ ವಾಹನ ಚಲಿಸಲು ನರಕ ಯಾತನೆಯಾಗಿದೆ’ ಎಂದು ಪೀಣ್ಯ 2ನೇ ಹಂತದ ನಿವಾಸಿ ಉಮೇಶ್ ರಾವಣ್ ದೂರಿದರು.

‘ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ ಎಂಬುದು ಪ್ರಕಟಣೆಗಳಲ್ಲಿ ಮಾತ್ರ ಕಾಣುತ್ತಿದೆ. ಅಧಿಕಾರಿಗಳು ರಸ್ತೆ ಗುಂಡಿಯಲ್ಲೂ ತಪ್ಪು ಲೆಕ್ಕ ತೋರಿಸಿ ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಬಂದಾಗ ಸಾವಿರಾರು ಕೋಟಿಯ ಯೋಜನೆಗಳ ಪ್ರಸ್ತಾಪವಾಗುತ್ತದೆ. ಆದರೆ ಗುಂಡಿ ಮುಚ್ಚುವುದಕ್ಕೆ ಮಾತ್ರ ಅಸಡ್ಡೆ ತೋರುತ್ತಿದ್ದಾರೆ’ ಎಂದು ರಾಜಗೋಪಾಲನಗರ ನಿವಾಸಿ ದಾರಿದೀಪ ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ರಸ್ತೆಯಲ್ಲಿರುವ ಗುಂಡಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.