ADVERTISEMENT

ಜೈಲಿನಲ್ಲಿದ್ದು ವಿಧ್ವಂಸಕ ಕೃತ್ಯಕ್ಕೆ ಸಂಚು: ಬೆಂಗಳೂರು ಸೇರಿ ಹಲವೆಡೆ NIA ದಾಳಿ

ಉಗ್ರಗಾಮಿ ಸಂಘಟನೆ ಲಷ್ಕರ್ ಎ ತಯಬಾದ (ಎಲ್‌ಇಟಿ) ಕೆಲ ಸದಸ್ಯರು ಜೈಲಿನಲ್ಲಿದ್ದುಕೊಂಡೇ ಕರ್ನಾಟಕದಲ್ಲಿ ಆತ್ಮಾಹುತಿ ದಾಳಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣ

ಪಿಟಿಐ
Published 5 ಮಾರ್ಚ್ 2024, 6:02 IST
Last Updated 5 ಮಾರ್ಚ್ 2024, 6:02 IST
ಎನ್ಐಎ
ಎನ್ಐಎ   

ನವದೆಹಲಿ: ಉಗ್ರಗಾಮಿ ಸಂಘಟನೆ ಲಷ್ಕರ್ ಎ ತಯಬಾದ (ಎಲ್‌ಇಟಿ) ಕೆಲ ಸದಸ್ಯರು ಜೈಲಿನಲ್ಲಿದ್ದುಕೊಂಡೇ ಕರ್ನಾಟಕದಲ್ಲಿ ಆತ್ಮಾಹುತಿ ದಾಳಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ಬೆಂಗಳೂರು ಸೇರಿದಂತೆ ದೇಶದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.

ಬೆಂಗಳೂರು ಸೇರಿದಂತೆ 7 ರಾಜ್ಯಗಳ 17 ಸ್ಥಳಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಎನ್‌ಐಎ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

2023 ರ ಜುಲೈ 8ರಂದು ಬೆಂಗಳೂರಿನಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಇಬ್ಬರು ಸೇರಿ ಸಂಘಟನೆಯ ಎಂಟು ಮಂದಿ ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಜನವರಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ADVERTISEMENT

ಈ ಆರೋಪಿಗಳ ಜೊತೆ ಇನ್ನೂ ಹಲವರು ಸಂಪರ್ಕದಲ್ಲಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಎನ್‌ಐಎ ಇಂದು ಈ ವ್ಯಾಪಕ ದಾಳಿ ಕೈಗೊಂಡಿದೆ.

ಆರೋಪಿಗಳಲ್ಲಿ ಕೇರಳದ ಕಣ್ಣೂರಿನ ಟಿ.ನಾಸೀರ್ ಎಂಬಾತ ಬೇರೊಂದು ಪ್ರಕರಣದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇನ್ನಿಬ್ಬರು ಆರೋಪಿಗಳಾದ ಜುನೈದ್ ಅಹ್ಮದ್ ಅಲಿಯಾಸ್ ಜೆಡಿ ಮತ್ತು ಸಲ್ಮಾನ್ ಖಾನ್ ವಿದೇಶಕ್ಕೆ ಪರಾರಿಯಾಗಿರುವ ಶಂಕೆ ಇದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಉಳಿದ ಆರೋಪಿಗಳು ಸೈಯದ್ ಸುಹೇಲ್ ಖಾನ್ ಅಲಿಯಾಸ್ ಸುಹೇಲ್, ಮೊಹಮ್ಮದ್ ಉಮರ್ ಅಲಿಯಾಸ್ ಉಮರ್, ಜಾಹಿದ್ ತಬ್ರೇಜ್ ಅಲಿಯಾಸ್ ಜಾಹಿದ್, ಸೈಯದ್ ಮುದಸ್ಸಿರ್ ಪಾಷಾ ಮತ್ತು ಮೊಹಮ್ಮದ್ ಫೈಸಲ್ ರಬ್ಬಾನಿ ಅಲಿಯಾಸ್ ಸಾದತ್ ಬಂಧನದಲ್ಲಿದ್ದಾರೆ. ಈ ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರೂವಾರಿ ಟಿ.ನಾಸೀರ್‌ನ ಕೈವಾಡವು ಈ ಸಂಚಿನಲ್ಲಿರುವ ಬಗ್ಗೆ ಇತರ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು. ಅದಾದ ಮೇಲೆ ಬಾಡಿ ವಾರಂಟ್‌ ಪಡೆದು ಜೈಲಿನಿಂದಲೇ ಸಿಸಿಬಿ ಪೊಲೀಸರು ನಾಸೀರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಪ್ರಕರಣವನ್ನು 2023ರ ಅಕ್ಟೋಬರ್‌ನಲ್ಲಿ ಎನ್‌ಐಎಗೆ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.