ADVERTISEMENT

ಕುಂದು ಕೊರತೆ: ‘ರಸ್ತೆ ದುರಸ್ತಿಪಡಿಸಿ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 22:47 IST
Last Updated 24 ಮಾರ್ಚ್ 2024, 22:47 IST
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ.
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ.   

‘ರಸ್ತೆ ದುರಸ್ತಿಪಡಿಸಿ’

ರಾಜಭವನ ರಸ್ತೆಯಿಂದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ ಸಂಖ್ಯೆ 7,8,9,10ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ, ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ನೋಡಲು ಬರುವ ದೇಶ–ವಿದೇಶಗಳ ಕ್ರಿಕೆಟ್‌ ಪ್ರೇಮಿಗಳಿಗೆ ಅನನಕೂಲವಾಗುತ್ತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳು, ಸಿಬ್ಬಂದಿ ಸಹ ಇದೇ ಹಾದಿಯಲ್ಲಿ ಸಾಗುತ್ತಾರೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ಡಾಂಬರ್‌ ಕಂಡು ವರ್ಷಗಳೇ ಕಳೆದಿವೆ. ಈಗಾಗಲೇ ಇಂಡಿಯನ್‌ ಪ್ರಿಮಿಯರ್‌ ಲೀಗ್‌ ಪ್ರಾರಂಭವಾಗಿದೆ. ಇಲ್ಲಿ ಪಂದ್ಯಗಳು ನಡೆಯುವ ಮುನ್ನ ಈ ರಸ್ತೆಗೆ ಡಾಂಬರೀಕರಣ ಮಾಡಬೇಕು.

-ಎಚ್. ದೊಡ್ಡ ಮಾರಯ್ಯ, ಕ್ರಿಕೆಟ್‌ ಪ್ರೇಮಿ

ADVERTISEMENT

––

ರಸ್ತೆಯಲ್ಲಿ ಹರಿಯುವ ಚರಂಡಿ ನೀರು

ವಿದ್ಯಾರಣ್ಯಪುರದ ಸಿಂಗಾಪುರದಲ್ಲಿರುವ ಸಿಂಹಾದ್ರಿ ಬಡಾವಣೆ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಚರಂಡಿ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ರಸ್ತೆಯಲ್ಲಿ ನೀರು ಹರಿಯುವ ಕಾರಣ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಯಲ್ಲಿ ತ್ಯಾಜ್ಯ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿನಿತ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

-ಪಾಂಡುರಂಗ ನಾಯಕ್, ಸಿಂಹಾದ್ರಿ ಬಡಾವಣೆ

––

‘ಕೆಟ್ಟು ನಿಂತಿರುವ ಕಾರು ಸ್ಥಳಾಂತರಿಸಿ’

ರಾಜಾಜಿನಗರ ಇಎಸ್ಐ ಆಸ್ಪತ್ರೆ ರಸ್ತೆಯ ‍‍ಪಾದಚಾರಿ ಮಾರ್ಗದ ಬಳಿ ಬಹಳ ದಿನಗಳಿಂದ ಕಾರೊಂದು ಕೆಟ್ಟು ನಿಂತಿದೆ. ಇದರಿಂದ, ಈ ಭಾಗದಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ. ಕಾರಿನ ಸುತ್ತಮುತ್ತಲಿನ ‍ಪ್ರದೇಶವು ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಮಾರ್ಪಟ್ಟಿದೆ. ಇದು ನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಆಗಿದೆ. ಆದ್ದರಿಂದ, ಸಂಚಾರ ಪೊಲೀಸರು ಈ ಕಾರನ್ನು ಕೂಡಲೇ ಸ್ಥಳಾಂತರಿಸಬೇಕು.

-ಶಿವಪ್ರಸಾದ್ ಎಸ್., ರಾಜಾಜಿನಗರ

--

‘ಪಾದಚಾರಿ ಮಾರ್ಗದಲ್ಲಿನ ಕಸ ತೆರವುಗೊಳಿಸಿ’

ಕೆಂಪೇಗೌಡ ರಸ್ತೆಯ ಶಿಕ್ಷಕರ ಭವನದ ಪಾದಚಾರಿ ಮಾರ್ಗದ ಮೇಲೆ ಮಣ್ಣು ಮಿಶ್ರಿತ ಜಲ್ಲಿಕಲ್ಲು, ಕಟ್ಟಡ ತ್ಯಾಜ್ಯವನ್ನು ಹಾಕಲಾಗಿದೆ. ಇದರಿಂದ, ಪಾದಚಾರಿ ಮಾರ್ಗದಲ್ಲಿ ಸಂಚರಿಸುವವರಿಗೆ ಅಡಚಣೆ ಉಂಟಾಗಿದೆ. ಸರ್ಕಾರಿ ಕಚೇರಿಗಳಿಗೆ ಬರುವ ಜನ ಇದೇ ದಾರಿಯ ಮೂಲಕವೇ ಹೋಗುತ್ತಾರೆ. ರಸ್ತೆಯಲ್ಲಿ ರಾಶಿಗಟ್ಟಲೆ ಕಸ ಹಾಕಿರುವುದರಿಂದ ಜನರು ಮುಖ್ಯರಸ್ತೆಯ ಮೂಲಕ ಹಾದು ಹೋಗಬೇಕಾಗಿದೆ. ಸ್ಥಳೀಯರು ಸಹ ಇಲ್ಲಿಯೇ ತ್ಯಾಜ್ಯವನ್ನು ತಂದು ಎಸೆದು ಹೋಗುತ್ತಿದ್ದಾರೆ. ಬಿಬಿಎಂಪಿ ಕೂಡಲೇ ಇಲ್ಲಿನ ಕಸ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

-ಶಿವು, ಬನ್ನಪ್ಪ ಪಾರ್ಕ್‌

ರಸ್ತೆಯಲ್ಲಿ ಹರಿಯುವ ಚರಂಡಿ ನೀರು.
ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಮುಂಭಾಗದಲ್ಲಿ ಕೆಟ್ಟು ನಿಂತಿರುವ ಕಾರು.
ಶಿಕ್ಷಕರ ಭವನದ ಪಾದಚಾರಿ ಮಾರ್ಗದಲ್ಲಿ ಹಾಕಿರುವ ಕಸದ ರಾಶಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.