ADVERTISEMENT

ಬೆಂಗಳೂರು- ಮುಂದುವರಿದ ಮಳೆ: ಉರುಳಿಬಿದ್ದ ಮರಗಳು

ಕಾಲುವೆಗಳು ಭರ್ತಿ: ರಸ್ತೆಯಲ್ಲಿ ಹರಿದ ನೀರು– ಪಾರಾದ ಬಿಎಂಟಿಸಿ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 21:04 IST
Last Updated 18 ಏಪ್ರಿಲ್ 2022, 21:04 IST
ಚಿಕ್ಕಪೇಟೆ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಮೇಲೆಯೇ ಸೋಮವಾರ ನೀರು ಹರಿದು, ಅದರಲ್ಲೇ ಜನರು ಓಡಾಡಿದರು – ಪ್ರಜಾವಾಣಿ ಚಿತ್ರ
ಚಿಕ್ಕಪೇಟೆ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಮೇಲೆಯೇ ಸೋಮವಾರ ನೀರು ಹರಿದು, ಅದರಲ್ಲೇ ಜನರು ಓಡಾಡಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಹಾಗೂ ರಾತ್ರಿ ಜೋರು ಮಳೆ ಸುರಿಯಿತು. ಗಾಳಿಯೂ ವೇಗವಾಗಿ ಬೀಸಿದ್ದರಿಂದ ಹಲವೆಡೆ ಮರಗಳು ಉರುಳಿಬಿದ್ದಿದ್ದವು.

ನಗರದಲ್ಲಿ ಕೆಲದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಬಿಡುವು ಕೊಡುತ್ತಲೇ ಮಳೆಯೂ ಸುರಿಯುತ್ತಿದೆ.

ಸೋಮವಾರ ಬೆಳಿಗ್ಗೆ ಕೆಲ ಹೊತ್ತು ಬಿಸಿಲು ಇತ್ತು. ಮಧ್ಯಾಹ್ನದ ನಂತರ, ಮೋಡ ಕವಿದು ತಂತುರು ಮಳೆ ಬರಲಾರಂಭಿಸಿತು. ಸಂಜೆ ಹಾಗೂ ರಾತ್ರಿ ವೇಳೆ ಗುಡುಗು–ಸಿಡಿಲು ಜೊತೆ ಮಳೆ ಅಬ್ಬರವಿತ್ತು. ಜೋರಾದ ಗಾಳಿಯೂ ಬೀಸಿತು.

ADVERTISEMENT

ಪೀಣ್ಯ, ಯಶವಂತಪುರ, ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ, ಶೇಷಾದ್ರಿಪುರ, ಸಂಪಂಗಿರಾಮನಗರ, ಇಂದಿರಾನಗರ, ಹಲಸೂರು, ವಿಲ್ಸನ್ ಗಾರ್ಡನ್, ಶಾಂತಿನಗರ, ವೈಟ್‌ಫೀಲ್ಡ್, ಬೆಳ್ಳಂದೂರು, ಈಜಿಪುರ, ಕೆ.ಆರ್. ಪುರ, ನಾಗವಾರ, ವಿದ್ಯಾರಣ್ಯಪುರ, ಯಲಹಂಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆ ಆಯಿತು.

ದೀಪಾಂಜಲಿನಗರ, ಗಿರಿನಗರ, ಹನುಮಂತನಗರ, ಬನಶಂಕರಿ, ಕೆಂಗೇರಿ, ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ಬಸವನಗುಡಿ, ಚಾಮರಾಜಪೇಟೆ, ಹೆಬ್ಬಾಳ, ಆರ್‌.ಟಿ.ನಗರ, ಸಂಜಯನಗರ, ಜೆ.ಸಿ.ನಗರ, ವಸಂತನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್‌ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲೂ ಮಳೆ ಸುರಿದಿದೆ.

ಉರುಳಿಬಿದ್ದ ಮರಗಳು: ನಗರದ ಹಲವೆಡೆ ಮರಗಳು ಹಾಗೂ ಕೊಂಬೆಗಳು ಉರುಳಿ ಬಿದ್ದಿದ್ದವು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ನಂದಿನಿ ಲೇಔಟ್‌ಗೆ ಹೊಂದಿಕೊಂಡಿರುವ ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ ಮೇಲೆ ಮರವೊಂದು ಬಿದ್ದಿತ್ತು. ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾರಿಗೂ ಪೆಟ್ಟಾಗಿಲ್ಲ.

‘ದೀಪಾಂಜಲಿ ನಗರ ಡಿಪೊದ ಬಸ್, ಗೊರಗುಂಟೆಪಾಳ್ಯದಿಂದ ಹೊರವರ್ತುಲ ರಸ್ತೆ ಮೂಲಕ ಲಗ್ಗೆರೆ ಕಡೆ ಹೊರಟಿತ್ತು. ರಾಜ್‌ಕುಮಾರ್ ಸಮಾಧಿ ಬಳಿಯ ರಸ್ತೆ ಪಕ್ಕದಲ್ಲಿದ್ದ ಮರ, ಮಳೆ ಹಾಗೂ ಗಾಳಿಯಿಂದ ಸಡಿಲಗೊಂಡಿತ್ತು. ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಮರ ಬಿದ್ದಿತ್ತು. ಬಸ್ಸಿನ ಚಾವಣಿ ಜಖಂಗೊಂಡಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ನವರಂಗ ವೃತ್ತ ಬಳಿಯ ಮೋದಿ ಆಸ್ಪತ್ರೆ ರಸ್ತೆಯಲ್ಲೂ ವಾಹನಗಳ ಮೇಲೆ ಮರವೊಂದು ಉರುಳಿಬಿದ್ದಿತ್ತು. ಎರಡು ಕಾರು, ಎರಡು ದ್ವಿಚಕ್ರ ವಾಹನ ಹಾಗೂ ಆಟೊ ಜಖಂಗೊಂಡಿವೆ. ಮರ ಬಿದ್ದಿದ್ದರಿಂದ ವಿಪರೀತ ಸಂಚಾರ
ದಟ್ಟಣೆ ಉಂಟಾಗಿತ್ತು.

ಮಾರುಕಟ್ಟೆ ಪ್ರದೇಶದಲ್ಲಿ ನೀರು: ಕೆ.ಆರ್‌. ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಿ.ವಿ.ಕೆ ಅಯ್ಯಂಗಾರ್ ರಸ್ತೆ, ತರಗುಪೇಟೆ ಸೇರಿದಂತೆ ಹಲವು ಮಾರುಕಟ್ಟೆ ಪ್ರದೇಶಗಳಲ್ಲಿ ರಸ್ತೆ ಮೇಲೆಯೇನೀರು ಹರಿಯಿತು. ಅದರಲ್ಲೇ ವಾಹನಗಳು ಓಡಾಡಿದವು.

ನಗರದ ಬಹುತೇಕ ಕಡೆ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಅಲ್ಲೆಲ್ಲ ಗುಂಡಿಯಲ್ಲಿನೀರು ನಿಂತುಕೊಂಡಿತ್ತು. ರಾಜಕಾಲುವೆ ಕಾಮಗಾರಿ ಸ್ಥಳದಲ್ಲಿ ನೀರು ಧಾರಾಕಾರವಾಗಿಹರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.