ADVERTISEMENT

ಮಳೆ ಹಾನಿ ನಿಯಂತ್ರಣ: ತುರ್ತು ಕಾಮಗಾರಿಗೂ ಅನುದಾನ ಇಲ್ಲ

₹ 411 ಕೋಟಿ ಕ್ರಿಯಾಯೋಜನೆಗೆ 5 ತಿಂಗಳಾದರೂ ಸಿಕ್ಕಿಲ್ಲ ಮಂಜೂರಾತಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 2:26 IST
Last Updated 19 ಮೇ 2022, 2:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಾನಿ ತಪ್ಪಿಸಲು ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಸಲುವಾಗಿ ಬಿಬಿಎಂಪಿಯು ₹ 411.32 ಕೋಟಿ ಪ್ರಸ್ತಾವವನ್ನು 2021ರ ಡಿಸೆಂಬರ್‌ನಲ್ಲೇ ಸರ್ಕಾರಕ್ಕೆ ಕಳುಹಿಸಿತ್ತು. ಐದು ತಿಂಗಳ ಬಳಿಕವೂ ಈ ಪ್ರಸ್ತಾವಕ್ಕೆ ಮಂಜೂರಾತಿ ಸಿಕ್ಕಿಲ್ಲ.

ತುರ್ತು ಕಾಮಗಾರಿಗಳಿಗೆ ತಕ್ಷಣವೇ ಅನುದಾನ ಬಿಡುಗಡೆ ಮಾಡುವುದಾಗಿ ವಾಗ್ದಾನ ಮಾಡಿದ್ದ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಅನುದಾನ ಬಿಡುಗಡೆಗೆ ಯಾವುದೇ ಕ್ರಮಕೈಗೊಂಡಿಲ್ಲ.

ನಗರದಲ್ಲಿ ಯಲಹಂಕ ವಲಯದಲ್ಲಿ ಸುರಿದ ಭಾರಿ ಮಳೆಗೆ ನೀರು ನುಗ್ಗಿದ್ದ ಜಕ್ಕೂರಿನ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಆರ್‌ಸಿ) ಹಾಗೂ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಸಮುಚ್ಚಯ ಪ್ರದೇಶಗಳಿಗೆ2021ರ ನ. 23ರಂದು ಹಾಗೂ ಪೈ ಬಡಾವಣೆ, ಗೆದ್ದಲಹಳ್ಳಿ, ಹಾಗೂ ಕೆ.ಆರ್‌.ಪುರ ಕ್ಷೇತ್ರದ ಜಲಾವೃತ ಪ್ರದೇಶಗಳಿಗೆ ನ.24ರಂದು ಮುಖ್ಯಮಂತ್ರಿ ಭೇಟಿ ನೀಡಿದ್ದರು. ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ತಕ್ಷಣವೇ ಕ್ರಿಯಾಯೋಜನೆ ರೂಪಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚನೆ ನೀಡಿದ್ದರು. ನ.24ರಂದು ಸಭೆ ನಡೆಸಿ ಮಳೆ ಹಾನಿ ತಡೆಯಲು ಕೈಗೊಳ್ಳಬೇಕಾದ ಶಾಶ್ವತ ಕ್ರಮ ಹಾಗೂ ತುರ್ತು ಕ್ರಮಗಳಿಗೆ ಪ್ರತ್ಯೇಕ ಕ್ರಿಯಾಯೋಜನೆ ರೂಪಿಸುವಂತೆ ನಿರ್ದೇಶನ ನೀಡಿದ್ದರು.

ADVERTISEMENT

ನಗರದಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ಯಲಹಂಕ ವಲಯದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಸಮುಚ್ಚಯ, ಟಾಟಾ ನಗರ, ಜಕ್ಕೂರಿನ ಜವಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ, ಮಹದೇವಪುರ ವಲಯದ ಕಸವನಹಳ್ಳಿ, ಗೆದ್ದಲಹಳ್ಳಿ. ಆರ್‌.ಆರ್‌.ನಗರ ವಲಯದ ಪ್ರಮೋದ್‌ ಬಡಾವಣೆ, ದೊಡ್ಡಬಿದರಕಲ್ಲು, ಬೊಮ್ಮನಹಳ್ಳಿ ವಲಯದ ಎಚ್‌ಎಸ್‌ಆರ್‌ ಬಡಾವಣೆ, ದಾಸರಹಳ್ಳಿ ವಲಯದ ಗುಂಡಪ್ಪ ಬಡಾವಣೆ, ದಕ್ಷಿಣ ವಲಯದ ಕೆ.ಪಿ.ಅಗ್ರಹಾರ, ಮನುವನ, ಪಶ್ಚಿಮ ವಲಯದ ಸಣ್ಣಕ್ಕಿ ಬಯಲು, ಪೂರ್ವ ವಲಯದ ಟೆಲಿಕಾಂ ಬಡಾವಣೆ, ನಾಗವಾರ ಪಾಳ್ಯ ಹಾಗೂ ಇತರ ಪ್ರದೇಶಗಳಲ್ಲಿ ಪದೇ ಪದೇ ಸಮಸ್ಯೆ ಎದುರಾಗುತ್ತಿದೆ.

ಈ ಸಮಸ್ಯೆಯನ್ನು ತಡೆಯಲು ಪ್ರಥಮ ಹಂತದ 69.83 ಕಿ.ಮೀ ರಾಜಕಾಲುವೆ, ದ್ವಿತೀಯ ಹಂತದ 97.10 ಕಿ.ಮೀ ರಾಜಕಾಲುವೆ ಸೇರಿ ಒಟ್ಟು 157.93 ಕಿ.ಮೀ ಉದ್ದದ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಒಟ್ಟು 292 ಕಾಮಗಾರಿಗಳ ಅನುಷ್ಠಾನಕ್ಕೆ ₹1,479.55 ಕೋಟಿ ಅನುದಾನದ ಅಗತ್ಯ ಇದೆ ಎಂದು ಬಿಬಿಎಂಪಿಯು 2021ರ ಡಿ.30ರಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಬಳಿಕ ಜಯನಗರ ಹಾಗೂ ಬಿಟಿಎಂ ಬಡಾವಣೆ ಕ್ಷೇತ್ರಗಳ ಕಾಮಗಾರಿಗಳನ್ನು ಸೇರಿಸಲಾಗಿತ್ತು. ತುರ್ತು ಕಾಮಗಾರಿ ಕೈಗೊಳ್ಳಲು ₹ 411.32 ಕೋಟಿ ಮಂಜೂರು ಮಾಡುವಂತೆ ಕೋರಿತ್ತು. ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆ ಅಭಿವೃದ್ಧಿಗೆ ₹ 1,500 ಕೋಟಿ ಒದಗಿಸುವುದಾಗಿ ಮುಖ್ಯಮಂತ್ರಿಯವರು 2022–23ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

2021ರ ಡಿ. 30ರಂದು ಕಳುಹಿಸಿದ ಕ್ರಿಯಾಯೋಜನೆಗೆ ಸರ್ಕಾರದಿಂದ ಮಂಜೂರಾತಿ ಸಿಗದ ಕಾರಣ ಬಿಬಿಎಂಪಿ ಮುಖ್ಯ ಆಯುಕ್ತರು 2022ರ ಏ. 8ರಂದು ನಗರಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದರು. ರಾಜಕಾಲುವೆ ದುರಸ್ತಿ ಕುರಿತು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅದರ ಪ್ರಕಾರ, ‘60.59 ಕಿ.ಮೀ ಉದ್ದದ ಪ್ರಥಮ ಹಂತದ ರಾಜಕಾಲುವೆ ಹಾಗೂ ₹102.87 ಕಿ.ಮೀ ಉದ್ದದ ದ್ವಿತೀಯ ಹಂತದ ರಾಜಕಾಲುವೆ ಸೇರಿ 163.45 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿಪಡಿಸಬೇಕಾಗಿದೆ. ₹ 1,500 ಕೋಟಿ ಅನುದಾನದಲ್ಲಿ ಒಟ್ಟು 306 ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ’.

‘ಇದರಲ್ಲಿ ಪ್ರಥಮ ಹಂತದ 20.40 ಕಿ.ಮೀ ರಾಜಕಾಲುವೆ, ದ್ವಿತೀಯ ಹಂತದ 31.36 ಕಿ.ಮೀ ರಾಜಕಾಲುವೆ ಸೇರಿ ಒಟ್ಟು 51.77 ಕಿ.ಮೀ. ಉದ್ದದ ರಾಜಕಾಲುವೆಗಳನ್ನು ದುರಸ್ತಿಪಡಿಸುವ 123 ಕಾಮಗಾರಿಗಳನ್ನು ₹ 495.35 ಕೋಟಿ ವೆಚ್ಚದಲ್ಲಿ ಮುಂದಿನ ಮಳೆಗಾಲದ ಒಳಗೆ ತುರ್ತಾಗಿ ಕೈಗೊಳ್ಳಬೇಕಿದೆ. ರಾಜಕಾಲುವೆ ದುರಸ್ತಿಗೆ ಅಗತ್ಯ ಇರುವ ₹ 1,500 ಕೋಟಿಯಲ್ಲಿ ₹ 495.35 ಕೋಟಿ ಅನುದಾನವನ್ನು ತಕ್ಷಣವೇ ಒದಗಿಸಬೇಕು’ ಎಂದು ಬಿಬಿಎಂಪಿ ಕೋರಿತ್ತು. ಇದಾಗಿ ಒಂದೂವರೆ ತಿಂಗಳು ಕಳೆದರೂ ಸರ್ಕಾರ ಈ ಪತ್ರಕ್ಕೆ ಸ್ಪಂದಿಸಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

112 ಕಿ.ಮೀ.ರಾಜಕಾಲುವೆ ಅಭಿವೃದ್ಧಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 842 ಕಿ.ಮೀ ಉದ್ದದ ನಾಲ್ಕು ಪ್ರಮುಖ ರಾಜಕಾಲುವೆಗಳಿದ್ದು, ಇವುಗಳಲ್ಲಿ 112.53 ಕಿ.ಮೀ ಉದ್ದದ ರಾಜಕಾಲುವೆಗಳನ್ನು 2018–19, 2019–20, 2020–21ನೇ ಸಾಲಿನ ಮುಖ್ಯಮಂತ್ರಿಗಳ ನವನಗರೋತ್ಥಾನ ಕಾರ್ಯಕ್ರಮದ ಅಡಿ ಅಭಿವೃದ್ಧಿಪಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.