ADVERTISEMENT

ರಾಜಧಾನಿಯಲ್ಲಿ ಅಬ್ಬರಿಸಿ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 18:06 IST
Last Updated 9 ನವೆಂಬರ್ 2019, 18:06 IST
ನಗರದ ಕಸ್ತೂರ್‌ ಬಾ ರಸ್ತೆಯಲ್ಲಿ ಶನಿವಾರ ರಾತ್ರಿ ಮಳೆ ಸುರಿಯುತ್ತಿದ್ದ ವೇಳೆಯೇ ವಾಹನಗಳು ಸಂಚರಿಸಿದವು –  ಪ್ರಜಾವಾಣಿ ಚಿತ್ರಗಳು 
ನಗರದ ಕಸ್ತೂರ್‌ ಬಾ ರಸ್ತೆಯಲ್ಲಿ ಶನಿವಾರ ರಾತ್ರಿ ಮಳೆ ಸುರಿಯುತ್ತಿದ್ದ ವೇಳೆಯೇ ವಾಹನಗಳು ಸಂಚರಿಸಿದವು –  ಪ್ರಜಾವಾಣಿ ಚಿತ್ರಗಳು    

ಬೆಂಗಳೂರು: ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಶನಿವಾರ ರಾತ್ರಿ ನಗರದ ಹಲವೆಡೆ ಧಾರಾಕಾರವಾಗಿ ಸುರಿಯಿತು.

ಬೆಳಿಗ್ಗೆಯಿಂದಲೇ ನಗರದಲ್ಲಿ ಬಿಸಿಲು ಇತ್ತು. ಸಂಜೆ ವೇಳೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ರಾತ್ರಿ 9ರ ಸುಮಾರಿಗೆ ಜಿಟಿ ಜಿಟಿ ಆಗಿ ಆರಂಭವಾದ ಮಳೆಯ ಅಬ್ಬರ ರಾತ್ರಿ 10ರವರೆಗೂ ಇತ್ತು.

ಇಂದಿರಾನಗರ, ಎಂ.ಜಿ.ರಸ್ತೆ, ಹಲಸೂರು,ಶಿವಾಜಿನಗರ, ಚಾಮರಾಜಪೇಟೆ, ಜಯನಗರ, ಹನುಮಂತನಗರ, ಗಿರಿನಗರ, ಬಸವನಗುಡಿ, ವಿಜಯನಗರ, ಬಸವೇಶ್ವರನಗರ, ರಾಜಾಜಿನಗರ, ಯಶವಂತಪುರ, ಮತ್ತೀಕೆರೆ, ಪೀಣ್ಯ, ವಿದ್ಯಾರಣ್ಯಪುರ, ಜಾಲಹಳ್ಳಿ, ಯಲಹಂಕ, ಆರ್‌.ಟಿ.ನಗರ, ಹೆಬ್ಬಾಳ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್‌ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಜೋರಾಗಿತ್ತು.

ADVERTISEMENT

ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಲ್ಲೂ ಜೋರು ಮಳೆ ಆಯಿತು.ನಗರದ ಹಲವೆಡೆ ರಸ್ತೆಯಲ್ಲೇ ನೀರು ಹರಿಯಿತು. ಆ ಭಾಗದ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಕೆಲ ಚಾಲಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಅದು ವಾಹನಗಳ ದಟ್ಟಣೆಗೆ ಕಾರಣವಾಯಿತು.

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ನಗರದಾದ್ಯಂತ ಬೆಳಿಗ್ಗೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜನ ಹಾಗೂ ವಾಹನಗಳ ಓಡಾಟವು ವಿರಳವಾಗಿತ್ತು.

ಬಹುತೇಕ ನಿವಾಸಿಗಳು ಸಂಜೆಯೇ ಹೊರಗೆ ಬಂದಿದ್ದರು. ಅದೇ ವೇಳೆ ಜೋರು ಮಳೆ ಸುರಿಯಿತು. ಸವಾರರನ್ನು ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಂಗಡಿಗಳಲ್ಲಿ ಆಶ್ರಯ ಪಡೆದರು. ಕೆಲವರು ಮಳೆಯಲ್ಲೇ ವಾಹನ ಚಲಾಯಿಸಿಕೊಂಡು ಹೋದರು.

ಸುರಿವ ಮಳೆಯಲ್ಲೇ ಸವಾರರು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋದರು

ವಸಂತನಗರದಲ್ಲಿ ಮನೆಗೆ ನುಗ್ಗಿದ ನೀರು: ವಸಂತನಗರ, ಅರ್‌.ಟಿ.ನಗರ, ಸಂಜಯನಗರ ಹಾಗೂ ಸುತ್ತಮುತ್ತ ಜೋರು ಮಳೆ ಆಗಿದೆ. ವಸಂತನಗರದಲ್ಲಿ ಕಾಲುವೆಯಲ್ಲಿ ತುಂಬಿ ಹರಿದ ನೀರು ಮನೆಗೆ ಹೋಗಿತ್ತು. ನಿವಾಸಿಗಳು ನೀರು ಹೊರ ಹಾಕುವುದರಲ್ಲಿ ನಿರತರಾಗಿದ್ದು ಕಂಡುಬಂತು.

‘ಮನೆಗೆ ನೀರು ನುಗ್ಗಿದ್ದ ಮಾಹಿತಿ ಬರುತ್ತಿದ್ದಂತೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.