ADVERTISEMENT

ಭಾರಿ ಮಳೆಯ ಮುನ್ಸೂಚನೆ ಇದ್ದರೂ ನಿರ್ಲಕ್ಷ್ಯ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 19:42 IST
Last Updated 19 ಮೇ 2022, 19:42 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಭಾರಿ ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ಗಮನ ಹರಿಸದೇ ನಿರ್ಲಕ್ಷ್ಯ ತೋರಿದ ಕಾರಣ ಅನಾಹುತವಾಗಿ ಈಗ ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳು ಜನ ಸಚಿವರನ್ನು ಹೊಂದಿರುವ ಮಹಾನಗರ ಇದು. ಆದರೆ ಮಳೆಗೆ ಸಂಬಂಧಿಸಿದಂತೆ ಶಾಸಕರು ಮತ್ತು ಅಧಿಕಾರಿಗಳ ಸಭೆ ಏಕೆ ಕರೆದಿಲ್ಲ? ಸಭೆ ನಡೆಸುವ ಕನಿಷ್ಠ ಸೌಜನ್ಯವೂ ಇವರಿಗಿಲ್ಲ ಎಂದು ಕಿಡಿಕಾರಿದರು.

‘ನಗರದ ಉಸ್ತುವಾರಿ ಸಚಿವರೂ ಮುಖ್ಯಮಂತ್ರಿಗಳೇ ಆಗಿದ್ದಾರೆ. ಬೆಂಗಳೂರು ಉಸ್ತುವಾರಿಗಾಗಿ ಇಬ್ಬರು ಸಚಿವರು ಪರಸ್ಪರ ಪೈಪೋಟಿಗಿಳಿದಿದ್ದೂ ನೋಡಿದ್ದೇವೆ. ಅಲ್ಲದೆ, ನಗರದಲ್ಲಿರುವ ಏಳು ಸಚಿವರು ಏನು ಮಾಡುತ್ತಿದ್ದಾರೆ. ಅವರು ಕ್ಷೇತ್ರಗಳಿಗೆ ತೆಗೆದುಕೊಂಡು ಹೋದ ಕೋಟ್ಯಂತರ ರೂಪಾಯಿ ಅನುದಾನ ಎಲ್ಲಿ ಹೋಯಿತು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ADVERTISEMENT

ಮುಖ್ಯಮಂತ್ರಿಯವರು ನಗರದಲ್ಲಿ ಒಂದಿಷ್ಟು ಕಾಟಾಚಾರಕ್ಕೆ ಸಂಚಾರ ಮಾಡುತ್ತಿದ್ದಾರೆ. ಅವರಿಗೆ ಮಳೆ ಅನಾಹುತ ಬಗೆಹರಿಸುವ ಮನಸ್ಸಿಲ್ಲ. ಬಜೆಟ್‌ ಅನುಷ್ಠಾನ ಮಾಡಲು ಸಭೆ ಮಾಡಿದ್ದಾರಾ? ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು, ಕಮಿಷನ್‌ ಹೊಡೆಯಲು ಈ ಸಭೆಗಳನ್ನು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.