ADVERTISEMENT

ಬೆಂಗಳೂರು: ಮಳೆ ನಿಂತ ಮೇಲೆ | ಕಲ್ಕೆರೆ ಕೆರೆ ಕೋಡಿ 2 ಅಡಿ ತಗ್ಗಿಸಲು ಸೂಚನೆ

ವಸತಿ ಬಡಾವಣೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಸಲಹೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 20:39 IST
Last Updated 23 ನವೆಂಬರ್ 2021, 20:39 IST
   

ಬೆಂಗಳೂರು: ಹೊರಮಾವು ವಾರ್ಡ್ ವ್ಯಾಪ್ತಿಯ ಬಡಾವಣೆಗಳು ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶಗಳು ಜೋರು ಮಳೆ ಬಂದಾಗ ಜಲಾವೃತವಾಗುವುದನ್ನು ತಡೆಯಲು ಕಲ್ಕೆರೆ ಕೆರೆ ಕೋಡಿಯನ್ನು ಎರಡು ಅಡಿ ತಗ್ಗಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊರಮಾವು ವಾರ್ಡ್ ವ್ಯಾಪ್ತಿಯಲ್ಲಿ ಜಲಾವೃತವಾದ ಸ್ಥಳಗಳನ್ನು ಅವರು ಸಚಿವ ಭೈರತಿ ಬಸವರಾಜು ಅವರ ಜೊತೆ ಮಂಗಳವಾರ ಪರಿಶೀಲನೆ ನಡೆಸಿದರು.

ಕಲ್ಕೆರೆ ಪಕ್ಕದಲ್ಲಿ ಬಾಲಾಜಿ ಲೇಔಟ್, ಕಾವೇರಿ ನಗರ, ಸಾಯಿ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳು ಹಾಗೂ ವಸತಿ ಪ್ರದೇಶಗಳು ತಗ್ಗು ಪ್ರದೇಶದಲ್ಲಿವೆ. ಜೋರು ಮಳೆಯಾದಾಗ ಹೆಬ್ಬಾಳ ಕಣಿವೆಯ ನೀರು ಹರಿದುಬರುವ ರಾಜಕಾಲುವೆ ತುಂಬಿ ವಡ್ಡರಪಾಳ್ಯ, ಸಾಯಿಬಾಬಾ ಬಡಾವಣೆ, ಅನುಗ್ರಹ ಬಡಾವಣೆಗಲೂ ಜಲಾವೃತಗೊಳ್ಳುತ್ತವೆ. ಹೆಬ್ಬಾಳ ಕಣಿವೆಯ ರಾಜಕಾಲುವೆಗೆ ಈಗಾಗಲೇ ಕೆಲವೆಡೆ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಲಾಗಿದೆ. ಕಚ್ಚಾ ರಾಜಕಾಲುವೆ ಇರುವಲ್ಲಿಯೂ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

ADVERTISEMENT

‘ಹೆಬ್ಬಾಳ ಕಣಿವೆಯ ರಾಜಕಾಲುವೆ ಹಾದುಹೋಗುವ ಪ್ರದೇಶದಲ್ಲಿ ರೈಲು ಹಳಿ ಬಳಿ 5 ಮೀ ಅಗಲದ ಎರಡು ತೂಬುಗಳಿವೆ. ಅಗಲ ಕಿರಿದಾಗಿರುವ ತೂಬುಗಳ ಗಾತ್ರ ಹಿಗ್ಗಿಸಬೇಕು. ರೈಲ್ವೆ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು. ಮಹದೇವಪುರ ವಲಯ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ, ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಎಂಜಿನಿಯರ್‌ಗಳಾದ ಪರಮೇಶ್ವರ್, ಸುಗುಣಾಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.