
ಬೆಂಗಳೂರು: ನಗರದಲ್ಲಿ ಮಂಗಳವಾರ ನಸುಕಿನಲ್ಲಿ ಸುರಿದ ಮಳೆಗೆ ಕೆ.ಆರ್. ಮಾರುಕಟ್ಟೆ ಸಂಪೂರ್ಣವಾಗಿ ಜಲಾವೃತ್ತಗೊಂಡಿತ್ತು. ಇದರಿಂದ ವ್ಯಾಪಾರ–ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಮಾರುಕಟ್ಟೆಯ ನೆಲಮಾಳಿಗೆಯಲ್ಲಿ ಎರಡು ಅಡಿಗೂ ಹೆಚ್ಚು ಮಳೆ ನೀರು ಸಂಗ್ರಹಗೊಂಡಿತ್ತು.
‘ಕೆ.ಆರ್. ಮಾರುಕಟ್ಟೆಯ ಆವರಣ ಕೆರೆಯಂತಾಗಿ ಮಾರ್ಪಟ್ಟಿತ್ತು. ಸಾವಿರಾರೂ ರೂಪಾಯಿ ಮೌಲ್ಯದ ಹೂವು, ಹಣ್ಣು ತರಕಾರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದವು. ಪ್ರತಿಬಾರಿ ಮಳೆ ಬಂದಾಗ ಪರಿಸ್ಥಿತಿ ಇದೇ ರೀತಿಯಾಗಿ ನಿರ್ಮಾಣವಾಗುತ್ತದೆ. ಆದರೆ ಇದುವರೆಗೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ’ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
‘ಕೆ.ಆರ್. ಮಾರುಕಟ್ಟೆಯ ನೆಲಮಾಳಿಗೆಯಲ್ಲಿ(ಸೆಲ್ಲಾರ್) ಸುಮಾರು ಎರಡು ಅಡಿ ಮಳೆ ನೀರು ಸಂಗ್ರಹಗೊಂಡಿತ್ತು. 100ಕ್ಕೂ ಹೆಚ್ಚು ವಾಹನಗಳು ಮುಳುಗಡೆಗೊಂಡಿದ್ದವು. ವ್ಯಾಪಾರಸ್ಥರು ಇಲ್ಲಿ ಸಂಗ್ರಹಿಸಿದ್ದ ತರಕಾರಿ–ಹಣ್ಣು, ಹೂವಿಗೂ ಹಾನಿಯಾಗಿದೆ. ಮಾರುಕಟ್ಟೆಯ ಕೆಲವು ತಗ್ಗು ಪ್ರದೇಶಗಳಲ್ಲೂ ನೀರು ನಿಂತು, ತರಕಾರಿ ಹಾಗೂ ಹೂವು–ಹಣ್ಣಿನ ವ್ಯಾಪಾರಿಗಳು ಪರದಾಡಿದರು’ ಎಂದು ಕೆ.ಆರ್. ಮಾರುಕಟ್ಟೆ ಹೂವಿನ ವರ್ತಕರ ಸಂಘದ ಅಧ್ಯಕ್ಷ ದಿವಾಕರ್ ಬೇಸರ ವ್ಯಕ್ತಪಡಿಸಿದರು.
‘ಸೆಲ್ಲರ್‌ನಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರನ್ನು ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಸ್ಪಂದಿಸಲಿಲ್ಲ. ವ್ಯಾಪಾರಿಗಳು ಸಂಗ್ರಹಿಸಿದ್ದ ಸಾವಿರಾರು ರೂಪಾಯಿ ಮೌಲ್ಯದ ಉತ್ಪನ್ನಗಳಿಗೆ ಹಾನಿಯಾಗಿದೆ. ಜೊತೆಗೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಹಕರು ಬಾರದೇ, ವ್ಯಾಪಾರ–ವಹಿವಾಟು ಸ್ಥಗಿತಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಕೆ.ಆರ್. ಮಾರುಕಟ್ಟೆಯ ರಸ್ತೆಯಲ್ಲಿ ಸಂಗ್ರಹಗೊಂಡ ಮಳೆ ನೀರಿನಲ್ಲಿ ವ್ಯಾಪಾರಿಯೊಬ್ಬರು ಹೂವಿನ ಬುಟ್ಟಿಗಳನ್ನು ಇಟ್ಟಿಕೊಂಡಿದ್ದರು
ಎಲ್ಲೆಲ್ಲಿ ಸಂಚಾರಕ್ಕೆ ಅಡ್ಡಿ?
ಬಾಗಲೂರು ಕ್ರಾಸ್‌ನಿಂದ ವಿಮಾನ ನಿಲ್ದಾಣ ರಸ್ತೆ
ಕುವೆಂಪು ವೃತ್ತದಿಂದ ಹೆಬ್ಬಾಳ ವೃತ್ತ, ದೇವಿನಗರ ಕ್ರಾಸ್, ದೊಮ್ಮಲೂರು ಅರಳಿಕಟ್ಟೆ ರಸ್ತೆಯಿಂದ ಗನ್‌ಟ್ರೂಪ್ ಕ್ವಾಟರ್ಸ್
ಕೆ.ಆರ್. ಪುರದಿಂದ ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಓ.ಎಂ. ಮುಖ್ಯರಸ್ತೆ, ಕಸ್ತೂರಿರಂಗ ನಗರ, ರಿಂಗ್ ರಸ್ತೆಯಿಂದ ಗ್ರ್ಯಾಂಡ್ ಸೀಸನ್ ಹೋಟೆಲ್ ಹತ್ತಿರದ ರಸ್ತೆ
ಮಹದೇವಪುರ ಸೇತುವೆ ಬಳಿ ಮಳೆ ನೀರು ಸಂಗ್ರಹಗೊಂಡು ಲೋರಿ ಜಂಕ್ಷನ್
ನಾಗವಾರ ಸಿಗ್ನಲ್ ಸರ್ವೀಸ್ ರಸ್ತೆಯಿಂದ ವೀರಣ್ಣಪಾಳ್ಯ
ಜಿಕೆವಿಕೆ ಹಿಂಭಾಗದ ಗೇಟ್‌ನಿಂದ ಎಂ.ಎಸ್. ಪಾಳ್ಯ ರಸ್ತೆ ಕಡೆಗೆ, ಸಿಕ್ಯುಎಎಲ್ ಕ್ರಾಸ್‌ನಲ್ಲಿ ಜೆ.ಸಿ. ನಗರದ ಕಡೆಗೆ
ಆರ್‌ಎಂಎಸ್ ಎರಡನೇ ಹಂತದಿಂದ ಫ್ಯಾಬೆಲ್ಲೆ ಬಿ. ಅಪಾರ್ಟ್‌ಮೆಂಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.