ಯಲಹಂಕ ಕಾಫಿ ಡೇ ಬಳಿ ಮಳೆ ನೀರು ನಿಂತು ವಿಮಾನ ನಿಲ್ದಾಣದ ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿತ್ತು
ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ಶನಿವಾರ ಸಂಜೆ ಮಳೆ ಸುರಿದಿದ್ದು, ಉತ್ತರ ಹಾಗೂ ಪೂರ್ವ ಭಾಗದ ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ.
ಶನಿವಾರ ಮಧ್ಯಾಹ್ನದ ನಂತರ ನಗರದಲ್ಲಿ ಬಿಸಿಲ ಝಳ ಕಡಿಮೆಯಾಗಿ, ಮೋಡದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ 5ರ ವೇಳೆಗೆ ಹಲವು ಭಾಗಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆಯಾಯಿತು. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಬಿದ್ದಿದೆ. ಹಲವು ದಿನಗಳಿಂದ ಬೇಸಿಗೆಯ ಧಗೆ ಹೆಚ್ಚಾಗಿದ್ದು, ಶನಿವಾರ ರಾತ್ರಿಯವರೆಗೂ ಹದವಾಗಿ ಸುರಿದ ಮಳೆ ತಂಪನೆಯ ಅನುಭವ ನೀಡಿತು. ಈ ವರ್ಷ ಮೊದಲ ಬಾರಿಗೆ ನಗರದೆಲ್ಲೆಡೆ ಶನಿವಾರ ಮಳೆ ಸುರಿದಿದೆ. ಮಾರ್ಚ್ 12ರಂದು ನಗರದ ಕೆಲವೆಡೆ ಮಾತ್ರ ತುಂತುರು ಮಳೆಯಾಗಿತ್ತು.
ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಬಿರುಗಾಳಿಗೆ ಕೆಲವು ಪ್ರದೇಶಗಳಲ್ಲಿ ಮರಗಳ ಕೊಂಬೆಗಳು ಮುರಿದುಬಿದ್ದವು. ಶನಿವಾರ ಸಂಜೆಯ ಮಳೆ, ಜನರ ವಾರಾಂತ್ಯದ ಓಡಾಟಕ್ಕೆ ಅಡ್ಡಿಯಾಗಿತ್ತು.
ಯಲಹಂಕ, ವಿದ್ಯಾರಣ್ಯಪುರ, ಹೊರಮಾವು, ಜಕ್ಕೂರು, ವರ್ತೂರು, ದೊಡ್ಡ ನೆಕ್ಕುಂದಿ, ಹಗದೂರು, ಕಾಡುಗೋಡಿ, ಚೌಡೇಶ್ವರಿಯಲ್ಲಿ ಹೆಚ್ಚು ಮಳೆಯಾಯಿತು. ಎಚ್‌ಎಸ್‌ಆರ್ ಲೇಔಟ್, ಎಚ್‌ಎಎಲ್ ವಿಮಾನ ನಿಲ್ದಾಣ, ಹಂಪಿನಗರ, ಕೆಂಗೇರಿ, ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಬನಶಂಕರಿ, ಪದ್ಮನಾಭ ನಗರ, ಕೋರಮಂಗಲ, ಬಿಟಿಎಂ ಲೇಔಟ್, ಜಯನಗರ, ದೊರೆಸಾನಿ ಪಾಳ್ಯ, ಗೊಟ್ಟಿಗೆರೆ, ಅರೆಕೆರೆ, ವಿಶ್ವೇಶ್ವರಪುರ, ಸಂಪಂಗಿರಾಮನಗರ, ಪಟ್ಟಾಭಿ
ರಾಮನಗರ, ಅಂಜನಾಪುರ, ಮಾರತ್‌ಹಳ್ಳಿ, ಹೂಡಿ, ಗರುಡಾಚಾರ್ ಪಾಳ್ಯ, ಶೆಟ್ಟಿಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.
ಯಲಹಂಕದ ಕಾಫಿ ಡೇ ಬಳಿ, ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಿಮಾನ ನಿಲ್ದಾಣದ ಕಡೆಯ ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ನಾಗವಾರದಿಂದ ಹೆಬ್ಬಾಳ, ಕೋಗಿಲು ಮೇಲ್ಸೇತುವೆ, ಪುಟ್ಟೇನಹಳ್ಳಿ, ಕಸ್ತೂರಿ ನಗರ, ಎಂಎಂಟಿ (ಟಿನ್ ಫ್ಯಾಕ್ಟರಿ), ಸ್ಪರ್ಶ ಆಸ್ಪತ್ರೆ, ಹೊರಮಾವುನಿಂದ ಕೆ.ಆರ್. ಪುರ, ಕೆ.ಆರ್.ಪುರದಿಂದ ಹೊಸಕೋಟೆ, ರಾಮಮೂರ್ತಿ ನಗರದಿಂದ ಬಾಣಸವಾಡಿ ರಸ್ತೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಿಂದ ಎಂ.ಎಸ್. ರಸ್ತೆ, ಹಜ್ ಭವನದಿಂದ ಬೆಳ್ಳಹಳ್ಳಿ, ಕೋಗಿಲು ಸಿಗ್ನಲ್‌ನಿಂದ ಕೋಗಿಲು ಗ್ರಾಮದವರೆಗೆ, ಕಲ್ಯಾಣನಗರ ಕೆಳಸೇತುವೆಯಿಂದ ಬಾಬುಸಾಪಾಳ್ಯ, ಜಯಂತಿನಗರದಿಂದ ಹೊರಮಾವು, ಹುಣಸೆಮಾರನಹಳ್ಳಿಯಿಂದ ವಿಮಾನ
ನಿಲ್ದಾಣ, ಹೆಬ್ಬಾಳದಿಂದ ಕೆ.ಆರ್. ಪುರ, ಕಾಡುಗೋಡಿ ಮೇಲ್ಸೇತುವೆಯಿಂದ ಬೆಳತ್ತೂರು, ವೀರಣ್ಣಪಾಳ್ಯದಿಂದ ನಾಗವಾರ, ಪರಪ್ಪನ ಅಗ್ರಹಾರದಿಂದ ರಾಯಸಂದ್ರ, ಸರ್ಜಾಪುರದಿಂದ ಕೊಡತಿ ಗೇಟ್, ರೂಪೇನ ಅಗ್ರಹಾರದಿಂದ ಹೊಸೂರು ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಈ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಚಾಮುಂಡಿನಗರ ಮುಖ್ಯರಸ್ತೆಯಲ್ಲಿ ಮರವೊಂದು ಬಿದ್ದಿದ್ದರಿಂದ ದಿಣ್ಣೂರು ಮುಖ್ಯರಸ್ತೆ ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.
ಯಲಹಂಕ: ತಾಲ್ಲೂಕು ವ್ಯಾಪ್ತಿಯ ಯಲಹಂಕ ನಗರ, ಬ್ಯಾಟರಾಯನಪುರ, ಜಾಲಾ ಹೋಬಳಿಗಳಲ್ಲಿ ಶನಿವಾರ ಸಂಜೆ ಆಲಿಕಲ್ಲು ಸಹಿತ ಮಳೆ ಸುರಿಯಿತು.
ಸಂಜೆ 4ರ ನಂತರ ಮೋಡ ಕವಿಯಿತು. ಗುಡುಗು ಸಹಿತ ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿಯಿತು. ವಿದ್ಯಾರಣ್ಯಪುರ, ಸಹಕಾರನಗರ, ಕೋಗಿಲು ಕ್ರಾಸ್, ಜಕ್ಕೂರು, ಬ್ಯಾಟರಾಯನಪುರ ಕೊಡಿಗೇಹಳ್ಳಿ ಅಮೃತಹಳ್ಳಿ ಮತ್ತಿತರ ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆಗಳು ಹಾಗೂ ಚರಂಡಿಗಳು ತುಂಬಿ ಹರಿದವು.
ಯಲಹಂಕ ಪೊಲೀಸ್ ಠಾಣೆ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ನೀರುನಿಂತ ಪರಿಣಾಮ, ಒಂದು ಗಂಟೆ ಈ ಮಾರ್ಗದಲ್ಲಿ ವಾಹನಸಂಚಾರ ಸ್ಥಗಿತಗೊಂಡಿತ್ತು. ಯಲಹಂಕ ಬೈಪಾಸ್, ಜಕ್ಕೂರು, ಶ್ರೀರಾಮಪುರ ಕ್ರಾಸ್ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು ಈ ಭಾಗದಲ್ಲಿ ಸಂಚರಿಸುವ ವಾಹನಸವಾರರು ತೊಂದರೆ ಅನುಭವಿಸಿದರು.
ಮಳೆಯಿಂದ ರಕ್ಷಣೆ ಪಡೆಯಲು ಕೈಚೀಲವನ್ನು ತಲೆಮೇಲೆ ಹಿಡಿದು ಸಾಗಿದ ಮಹಿಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.