ADVERTISEMENT

597 ಕಡೆ ಒತ್ತುವರಿ ತೆರವು ಬಾಕಿ -ಕೇಂದ್ರ ಸರ್ಕಾರ

ಬಿಬಿಎಂಪಿಯಿಂದ ರಾಜಕಾಲುವೆ ಕುರಿತು ಮಾಹಿತಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಉತ್ತರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 22:15 IST
Last Updated 22 ಡಿಸೆಂಬರ್ 2022, 22:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಂಗಳೂರಿನಲ್ಲಿ ಬಿಬಿಎಂಪಿ 146 ಕಡೆ ರಾಜಕಾಲುವೆಗಳ ಒತ್ತುವರಿ ತೆರವು ಮಾಡಿದ್ದು, 597 ಕಡೆ ಒತ್ತುವರಿ ತೆರವಿಗೆ ಬಾಕಿ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲೋಕಸಭೆಯಲ್ಲಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪ್ರಶ್ನೆಗೆ ಗುರುವಾರ ಲಿಖಿತ ಉತ್ತರ ನೀಡಿರುವ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌, ‘ಈ ವರ್ಷ 45 ಕಡೆ ಹೊಸದಾಗಿ ರಾಜಕಾಲುವೆಗಳ ಒತ್ತುವರಿ ಆಗಿದೆ. 125 ಪ್ರಕರಣಗಳು ನ್ಯಾಯಾಲಯದಲ್ಲಿವೆ’ ಎಂದು ತಿಳಿಸಿದ್ದಾರೆ. ‌

‘ಕಳೆದ ಕೆಲವು ವರ್ಷಗಳಿಂದ ಅತಿವೃಷ್ಟಿ, ಕ್ಷಿಪ್ರ ನಗರೀಕರಣ, ಒತ್ತುವರಿ ಮತ್ತಿತರ ಅಂಶಗಳು ಬೆಂಗಳೂರಿನಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿವೆ ಎಂದು ಬಿಬಿಎಂಪಿಯು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.ನಗರ ಸಾರಿಗೆ, ರಸ್ತೆಗಳು, ಬಡಾವಣೆ ರಚನೆ, ಎಸ್‌ಇಜೆಡ್, ಐಟಿ ಪಾರ್ಕ್‌ಗಳಂತಹ ಮೂಲಸೌಕರ್ಯಗಳನ್ನು ಒದಗಿಸುವ ಬೇಡಿಕೆ ಗಣನೀಯವಾಗಿ ಹೆಚ್ಚಿದ್ದು, ಅಂತರ್ಜಲ ಕುಸಿತ ಹಾಗೂ ಪ್ರವಾಹಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ 859 ಕಿ.ಮೀ. ಉದ್ದದ ಪ್ರಾಥಮಿಕ ಹಾಗೂ ಎರಡನೇ ಹಂತದ ರಾಜಕಾಲುವೆ ಜಾಲ ಇದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಬೆಂಗಳೂರಿನ ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನಾ ಸಂಸ್ಥೆಯು ಬೆಂಗಳೂರು ಮಹಾನಗರ ಪ್ರದೇಶದ ಕೆರೆಗಳ ಕುರಿತು 2018ರ ಮಾರ್ಚ್‌ನಲ್ಲಿ ವರದಿ ಸಿದ್ಧಪಡಿಸಿದೆ. ಬೆಂಗಳೂರು ಮಹಾನಗರ ಪ್ರದೇಶದ 1,521 ಜಲಕಾಯಗಳನ್ನು ಮೂರು ಭಾಗಗಳಾಗಿ ವಿಭಜಿಸಿದೆ. ಮೂರು ಎಕರೆಗಿಂತ ಜಾಸ್ತಿ ಇರುವುದು ಕೆರೆ, 1ರಿಂದ 3 ಎಕರೆ ಇರುವುದು ಕಟ್ಟೆ/ಗೊಕಟ್ಟೆ, ಒಂದು ಎಕರೆಗಿಂತ ಕಡಿಮೆ ಇರುವುದು ಕುಂಟೆ ಎಂದು ವರ್ಗೀಕರಿಸಿದೆ’ ಎಂದು ಸಚಿವರು ತಿಳಿಸಿದ್ದಾರೆ.

‘ಈ ವರದಿಯ ಪ್ರಕಾರ, ಕೆಲವು ವರ್ಷಗಳಿಂದ 497 ಕೆರೆಗಳಲ್ಲಿ 102, 200 ಕಟ್ಟೆಗಳಲ್ಲಿ 115, 824 ಕುಂಟೆಗಳಲ್ಲಿ 620 ಮೂಲಸ್ವರೂಪ ಕಳೆದುಕೊಂಡಿವೆ. ಜಲಾನಯನ ಪ್ರದೇಶಗಳ ಅವನತಿ, ಕಸ ವಿಲೇವಾರಿ, ನಿರ್ವಹಣೆ ಕೊರತೆ, ಹೂಳು ತುಂಬಿರುವುದು ಇದಕ್ಕೆ ಕಾರಣ’ ಎಂದು ಅವರು ಹೇಳಿದ್ದಾರೆ.

‘ರಾಜಕಾಲುವೆ ಹಾಗೂ ಜಲಮೂಲಗಳ ಒತ್ತುವರಿ ತೆರವಿನ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಭೂದಾಖಲೆಗಳ ಸಹಾಯಕ ನಿರ್ದೇಶಕರು ಸರ್ವೆ ನಡೆಸಿ ತಹಶೀಲ್ದಾರ್‌ ಆದೇಶ ಹೊರಡಿಸಿದ ಬಳಿಕ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂಬುದಾಗಿ ಪಾಲಿಕೆ ತಿಳಿಸಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.