ADVERTISEMENT

ಬೆಂಗಳೂರು: ಡಿ.14ಕ್ಕೆ ರಾಷ್ಟ್ರೀಯ ಲೋಕ ಅದಾಲತ್‌

35 ಸಾವಿರ ಪ್ರಕರಣ ಇತ್ಯರ್ಥ ಪಡಿಸುವ ಗುರಿ: ಪ್ರಾಧಿಕಾರ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 14:21 IST
Last Updated 29 ನವೆಂಬರ್ 2024, 14:21 IST
ಸರ್ವರಿಗೂ ನ್ಯಾಯ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸ) 15100 ಸಹಾಯವಾಣಿ ಸಂಖ್ಯೆಯನ್ನು ರೂಪಿಸಿದ್ದು, ಇದರ ಪ್ರಚಾರದ ಭಿತ್ತಿಪತ್ರವನ್ನು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಮುರಳೀಧರ್ ಪೈ (ಬಲಭಾಗದಲ್ಲಿರುವವರು) ಹಾಗೂ  ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವರದರಾಜ್ ಬಿಡುಗಡೆ ಮಾಡಿದರು
ಸರ್ವರಿಗೂ ನ್ಯಾಯ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸ) 15100 ಸಹಾಯವಾಣಿ ಸಂಖ್ಯೆಯನ್ನು ರೂಪಿಸಿದ್ದು, ಇದರ ಪ್ರಚಾರದ ಭಿತ್ತಿಪತ್ರವನ್ನು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಮುರಳೀಧರ್ ಪೈ (ಬಲಭಾಗದಲ್ಲಿರುವವರು) ಹಾಗೂ  ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವರದರಾಜ್ ಬಿಡುಗಡೆ ಮಾಡಿದರು   

ಬೆಂಗಳೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ನಾಲ್ಸ) ಸೂಚನೆಯಂತೆ ಬೆಂಗಳೂರು ನಗರ ಜಿಲ್ಲೆಯ ನ್ಯಾಯಾಲಯಗಳಲ್ಲಿ ಡಿ.14ರಂದು ಲೋಕ ಅದಾಲತ್ ನಡೆಯಲಿದೆ ಎಂದು ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಧೀಶ, ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಮುರಳೀಧರ್ ಪೈ ಹಾಗೂ  ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ವರದರಾಜ್ ತಿಳಿಸಿದರು.

ವರ್ಷಕ್ಕೆ ನಾಲ್ಕು ಬಾರಿ ಲೋಕ ಅದಾಲತ್‌ ನಡೆಯುತ್ತದೆ. ಈ ವರ್ಷದ ಕೊನೆಯ ಅದಾಲತ್‌ ರಾಷ್ಟ್ರದಾದ್ಯಂತ ಡಿ.14ಕ್ಕೆ ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದ ಲೋಕ ಅದಾಲತ್‌ನಲ್ಲಿ 26,353 ಬಾಕಿ ಪ್ರಕರಣಗಳು ಮತ್ತು 3,86,241 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿತ್ತು. ಸದ್ಯ 3,89,520 ಪ್ರಕರಣಗಳು ಬಾಕಿ ಇವೆ. ಅದರಲ್ಲಿ ಈ ಬಾರಿ 35 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ವಸೂಲಾತಿ , ಉದ್ಯೋಗದಲ್ಲಿ ಪುನರ್ ಸ್ಥಾಪಿಸುವ ಪ್ರಕರಣ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವೈವಾಹಿಕ, ಕುಟುಂಬ ನ್ಯಾಯಾಲಯದ ಪ್ರಕರಣಗಳು (ವಿಚ್ಛೇದನಗಳನ್ನು ಹೊರತುಪಡಿಸಿ), ಜಿಲ್ಲಾ ಗ್ರಾಹಕರ ವೇದಿಕೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿತ, ಸಾಲ ವಸೂಲಾತಿ, ಚೆಕ್ ಅಮಾನ್ಯ ಪ್ರಕರಣಗಳು, ಮೋಟರು ಅಪಘಾತ ಪರಿಹಾರ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು ಮತ್ತು ರಾಜಿಯಾಗಬಲ್ಲ ಸಿವಿಲ್ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಹೇಳಿದರು.

ADVERTISEMENT

ನಗರ ಜಿಲ್ಲೆ ವ್ಯಾಪ್ತಿಯಲ್ಲಿ 96 ಜಿಲ್ಲಾ ನ್ಯಾಯಾಲಯಗಳಿವೆ. ಅದರಲ್ಲಿ ವಿಶೇಷ ನ್ಯಾಯಾಲಯ, ಜನಪ್ರತಿನಿಧಿಗಳ ನ್ಯಾಯಾಲಯ ಹೀಗೆ ಕೆಲವು ನ್ಯಾಯಾಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ನ್ಯಾಯಾಲಯಗಳಲ್ಲಿ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು. ಕಕ್ಷಿದಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕೋರಿದರು.

ಕಾನೂನು ಸೇವೆಗಳ ಪ್ರಾಧಿಕಾರವು ಜೈಲಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಮತ್ತು ಶಿಕ್ಷೆಗೊಳಗಾದ ಕೈದಿಗಳಿಗೆ ಕಾನೂನು ನೆರವು ನೀಡಲು ನಿರ್ಧರಿಸಿದೆ. ವಕೀಲರನ್ನು ನೇಮಿಸಿಕೊಂಡು ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸಲು, ವಾದ ಮಂಡಿಸಲು ಸಾಧ್ಯ ಇಲ್ಲದವರು ‘ಲೀಗಲ್‌ ಏಡೆಡ್‌ ಡಿಫೆನ್ಸ್‌ ಸಿಸ್ಟಂ’ ಮೂಲಕ ನ್ಯಾಯಾಲಯದ ಗಮನಕ್ಕೆ ತಂದರೆ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಲಾಗುವುದು ಎಂದು ತಿಳಿಸಿದರು.

ಪ್ರಾಧಿಕಾರದ ಉಚಿತ ಸೇವೆಗಳನ್ನು ಪಡೆಯಲು ‘ನಾಲ್ಸ’ ಸಹಾಯವಾಣಿ ಆರಂಭಿಸಿದೆ. ದೇಶದ ಯಾವುದೇ ಭಾಷೆ, ಯಾವುದೇ ರಾಜ್ಯದಿಂದ ಸಹಾಯವಾಣಿ ಸಂಖ್ಯೆ 15100ಗೆ ಕರೆ ಮಾಡಿದರೆ ಆಯಾ ಭಾಷೆಯಲ್ಲಿಯೇ ಸ್ಪಂದಿಸುವ ವ್ಯವಸ್ಥೆ ಇದಾಗಿದೆ ಎಂದರು.

ವರ್ಷಕ್ಕೆ ನಾಲ್ಕು ಬಾರಿ ನಡೆಯುವ ಲೋಕ ಅದಾಲತ್‌ ರಾಜಿಯಾಗಬಲ್ಲ ಪ್ರಕರಣಗಳ ಇತ್ಯರ್ಥ ಮಾಡುವ ಗುರಿ ಜನತಾ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣಗಳಿಗೂ ಪರಿಹಾರ ಸಾಧ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.