ADVERTISEMENT

‌ವ್ಯಸನ ಮುಕ್ತ ಕೇಂದ್ರದಲ್ಲಿ ಯುವಕ ಸಾವು: ಇನ್‌ಸ್ಪೆಕ್ಟರ್‌ ಸೇರಿ ನಾಲ್ವರ ಅಮಾನತು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 16:09 IST
Last Updated 3 ಡಿಸೆಂಬರ್ 2025, 16:09 IST
<div class="paragraphs"><p>ಅಮಾನತು</p></div>

ಅಮಾನತು

   

ಬೆಂಗಳೂರು: ಅಡಕಮಾರನಹಳ್ಳಿಯ ವ್ಯಸನ ಮುಕ್ತ ಕೇಂದ್ರದಲ್ಲಿದ್ದ ಯುವಕನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕನಗರ ಠಾಣೆಯ ಇನ್‌ಸ್ಪೆಕ್ಟರ್‌ ಶಿವಕುಮಾರ್ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿ ನಗರ ಜಂಟಿ ಪೊಲೀಸ್‌ ಕಮಿಷನರ್ ಆದೇಶಿಸಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್‌ ಆರ್‌.ವೀರೇಶ್ ಅವರನ್ನು ವಿವೇಕನಗರ ಠಾಣೆಗೆ ವರ್ಗಾವಣೆ ಮಾಡಿ, ಆದೇಶಿಸಲಾಗಿದೆ.

ಸೊಣ್ಣೇನಹಳ್ಳಿಯ ನಿವಾಸಿ ದರ್ಶನ್(23) ಅವರು ಮೃತಪಟ್ಟಿದ್ದ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. 

ADVERTISEMENT

ದರ್ಶನ್‌ ಅವರ ತಾಯಿ ಆದಿಲಕ್ಷ್ಮಿ ಅವರು ನೀಡಿದ್ದ ದೂರು ಆಧರಿಸಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಶಿವಕುಮಾರ್, ಸಿಬ್ಬಂದಿ ಪವನ್ ಹಾಗೂ ಸೋಷಿಯಲ್‌ ಸರ್ವಿಸ್‌ ಕೇಂದ್ರದ ಮಾಲೀಕರ ವಿರುದ್ಧ ಕೊಲೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಏನಿದು ಪ್ರಕರಣ?: ‘ನನ್ನ ಮಗ ದರ್ಶನ್‌ ಅವರಿಗೆ ಪ್ರತಿನಿತ್ಯ ಮದ್ಯ ಸೇವಿಸುವ ಅಭ್ಯಾಸವಿತ್ತು. ಮದ್ಯ ಸೇವಿಸಿ ಬಂದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ವಿವೇಕನಗರ ಠಾಣೆಯ ಪೊಲೀಸರು ದರ್ಶನ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ನ.15ರಂದು ಠಾಣೆಗೆ ತೆರಳಿ ಮಗನನ್ನು ಮನೆಗೆ ಕಳುಹಿಸುವಂತೆ ಕೋರಿಕೊಂಡಿದ್ದೆ. ಅವನು ಎಲ್ಲರ ಬಳಿ ಗಲಾಟೆ ಮಾಡಿಕೊಳ್ಳುತ್ತಿದ್ದಾನೆ. ಅವನನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಪೊಲೀಸರು ಹೇಳಿದ್ದರು. ಮಗನಿಗೆ ಕುಡಿತದ ಚಟ ಬಿಡಿಸಲು ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸುವಂತೆ ನಾನೇ ಪೊಲೀಸರ ಬಳಿ ಮನವಿ ಮಾಡಿದ್ದೆ. ಅವರು ಕೇಂದ್ರಕ್ಕೆ ಸೇರಿಸಿದ್ದರು’ ಎಂದು ಆದಿಲಕ್ಷ್ಮಿ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

‘ವ್ಯಸನ ಮುಕ್ತ ಕೇಂದ್ರಕ್ಕೆ ಪ್ರತಿನಿತ್ಯ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದೆ. ಮಗ ಚೆನ್ನಾಗಿದ್ದಾನೆ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದರು. ನ.26ರ ಬೆಳಿಗ್ಗೆ 11ರ ಸುಮಾರಿಗೆ ಕೇಂದ್ರದ ಸಿಬ್ಬಂದಿ ಕರೆ ಮಾಡಿ ನಿಮ್ಮ ಮಗ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದರು. ಆ ಕೇಂದ್ರಕ್ಕೆ ಹೋಗುವಷ್ಟರಲ್ಲಿ ಮೃತದೇಹವನ್ನು ನೆಲಮಂಗಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಸಂಬಂಧ ಯಾವುದೇ ಮಾಹಿತಿ ನೀಡಿರಲಿಲ್ಲ. ಉಸಿರಾಟದ ತೊಂದರೆ ಇತ್ತು ಎಂಬುದಾಗಿ ಹೇಳುತ್ತಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.