ADVERTISEMENT

ಬೆಂಗಳೂರು: ಪ್ರೇಯಸಿಗೆ ಆಭರಣ ಮಾಡಿಸಲು ಸಂಬಂಧಿ ಮನೆಯಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 16:15 IST
Last Updated 11 ಅಕ್ಟೋಬರ್ 2025, 16:15 IST
   

ಬೆಂಗಳೂರು: ಪ್ರೇಯಸಿಗೆ ಚಿನ್ನಾಭರಣ ಮಾಡಿಸಲು ಸಂಬಂಧಿಕರೊಬ್ಬರ ಮನೆಯಲ್ಲೇ ನಗದು ಮತ್ತು ಆಭರಣ ಕಳವು ಮಾಡಿದ್ದ ಆರೋಪಿ, ಗಟ್ಟಹಳ್ಳಿ ನಿವಾಸಿ ಶ್ರೇಯಸ್ (23) ಎಂಬಾತನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ₹ 56.17 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ ಮತ್ತು ₹3.46 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಆರೋಪಿ ಸೆ.15ರಂದು ತನ್ನ ಸಂಬಂಧಿ ಹರೀಶ್ ಎಂಬುವವರ ಮನೆಯ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ. ಹರೀಶ್‌ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಆರೋಪಿ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಬಂಧಿ ಹರೀಶ್‌ ಅವರ ಮನೆಗೆ ಆಗಾಗ್ಗೆ ಹೋಗಿ ಬರುತ್ತಿದ್ದ. ಆಗ ಅವರ ಮನೆಯಲ್ಲಿರುವ ನಗದು, ಚಿನ್ನಾಭರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ. ಈ ಮಧ್ಯೆ ಬನ್ನೇರುಘಟ್ಟ ನಿವಾಸಿ, ಕೌಟುಂಬಿಕ ಕಾರಣಗಳಿಗೆ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ಶಾಲಾ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಆಕೆಯ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಆಕೆಗೆ ಚಿನ್ನಾಭರಣ ಮಾಡಿಸಲು ಹಣ ಹೊಂದಿಸುತ್ತಿದ್ದ. ಆದರೆ, ತನ್ನ ಸಂಬಳದ ಹಣದಲ್ಲಿ ಕಷ್ಟವಾಗಿತ್ತು. ಹೀಗಾಗಿ, ಕಳ್ಳತನ ಹಾದಿ ಹಿಡಿದಿದ್ದಾನೆ ಎಂದು ಪೊಲೀಸರು ಹೇಳಿದರು.

ಆರು ತಿಂಗಳ ಹಿಂದೆಯೂ ದೂರುದಾರ ಹರೀಶ್‌ ಅವರ ಮನೆಯಲ್ಲೇ ಕಳ್ಳತನ ಮಾಡಿದ್ದ. ಆದರೆ, ಕಡಿಮೆ ಮೊತ್ತದ ಚಿನ್ನ, ನಗದು ಕಳುವಾಗಿದ್ದರಿಂದ ಅವರು ದೂರು ನೀಡಿರಲಿಲ್ಲ. ಅದನ್ನೇ ದುರುಪಯೋಗ ಪಡಿಸಿಕೊಂಡ ಆರೋಪಿ, ಕಳೆದ ತಿಂಗಳು ಹರೀಶ್‌ ಅವರ ಕುಟುಂಬ ಮನೆಗೆ ಬೀಗ ಹಾಕಿಕೊಂಡು ಸಮೀಪದಲ್ಲಿ ಇರುವ ಸಂಬಂಧಿ ಮನೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಮನೆಗೆ ಬಂದು ಕಳ್ಳತನ ಮಾಡಿದ್ದ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.