ADVERTISEMENT

'ಹೊಂಡ' ಸಿಟಿಯ ಪಡಿಪಾಟಲು | ಕೆರೆ ಕಾಲುವೆಯಲ್ಲ, ಇದು ರಸ್ತೆ!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಜನರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:12 IST
Last Updated 22 ಸೆಪ್ಟೆಂಬರ್ 2025, 0:12 IST
ಮಾರತ್‌ಹಳ್ಳಿ–ಕಾಡುಬೀಸನಹಳ್ಳಿ ರಸ್ತೆ ಎಂಬ ಕೆಸರುಗದ್ದೆಯಲ್ಲಿ ವಾಹನಗಳು ಸಂಚರಿಸುತ್ತಿರುವುದು
ಮಾರತ್‌ಹಳ್ಳಿ–ಕಾಡುಬೀಸನಹಳ್ಳಿ ರಸ್ತೆ ಎಂಬ ಕೆಸರುಗದ್ದೆಯಲ್ಲಿ ವಾಹನಗಳು ಸಂಚರಿಸುತ್ತಿರುವುದು   

ಬೆಂಗಳೂರು: ‘ಇದು ಕೆರೆಯಲ್ಲ.. ಕಾಲುವೆಯೂ ಅಲ್ಲ.. ಮಾರತ್‌ಹಳ್ಳಿ–ಕಾಡುಬೀಸನಹಳ್ಳಿ ರಸ್ತೆ’ ಎಂದು ಕೆಸರು ತುಂಬಿದ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಪರದಾಡುವ ವಿಡಿಯೊವನ್ನು ಸ್ಥಳೀಯರು ಹಂಚಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅನೇಕ ನೆಟ್ಟಿಗರು ಧ್ವನಿಗೂಡಿಸಿದ್ದಾರೆ.

ಮಧುಕುಮಾರ್‌ ವಿ.‍ಪಿ. ಅವರು ‘ಎಕ್ಸ್‌’ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ‘ಬೆಂಗಳೂರಿನವರು ಉತ್ತಮ ರಸ್ತೆ ಮತ್ತು ಮೂಲಸೌಕರ್ಯಗಳನ್ನು ಕೇಳಿದರೆ, ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಬೇಡಿ ಎಂದು ಉಪಮುಖ್ಯಮಂತ್ರಿ ಹೇಳುತ್ತಾರೆ’ ಎಂದೂ ತಿಳಿಸಿದ್ದಾರೆ.

ಆಟೊದಲ್ಲಿ ಸಾಗುವಾಗ ಮಾಡಿರುವ ಕೆಸರುಮಯ ರಸ್ತೆಯ ವಿಡಿಯೊವನ್ನು ವೈಟಿಕೆಟಿ ಇಂಡಿಯಾ ಎಂಬ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‘ಇದು ರಸ್ತೆಯಲ್ಲ. ನಾಗರಿಕರಿಗೆ ರಾಜ್ಯ ಪ್ರಾಯೋಜಿತ ಚಿತ್ರಹಿಂಸೆ’ ಎಂದು ಘೋಷವಾಕ್ಯ ನೀಡಲಾಗಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುವ ನಮ್ಮ ಬೆಂಗಳೂರಿಗೆ ಸುಸ್ವಾಗತ. ಇಲ್ಲಿ ಗುಂಡಿಗಳು ಶಾಶ್ವತ. ಇಲ್ಲಿನ ನಿವಾಸಿಗಳಿಗೆ ನರಕ ನಿರಂತರ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಈ ವಿಡಿಯೊಗಳಿಗೆ ಅನೇಕರು ಆಕ್ರೋಶದಿಂದ, ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಚರ್ಚೆಗೂ, ಪಕ್ಷಗಳ ಪರ–ವಿರೋಧ ವಾದಿಸುವುದಕ್ಕೂ ಈ ವಿಡಿಯೊ ಕಾರಣವಾಗಿದೆ.

‘ನೀವು ಕಾಂಗ್ರೆಸ್‌ ಅನ್ನು ತರಲು ಆದ್ಯತೆ ನೀಡಿದ್ದೀರಿ. ಈಗ ಅವರೊಂದಿಗೆ ಮಾತನಾಡಿ’ ಎಂದು ಒಬ್ಬರು ಸಲಹೆ ನೀಡಿದ್ದಾರೆ. ‘ಯಾರು ಇಲ್ಲಿನ ಸ್ಥಳೀಯ ಶಾಸಕರು, ಸಂಸದರು?’ ಎಂದು ಮತ್ತೊಬ್ಬರು ಪ್ರಶ್ನೆ ಎತ್ತಿದ್ದಾರೆ. ಮಹದವೇಪುರದ ಜನರು ಕಳೆದ 20 ವರ್ಷಗಳಿಂದ ಬಿಜೆಪಿಯ ಕೋಡಂಗಿ ಮತ್ತು ಅವರ ಕುಟುಂಬವನ್ನು ಆಯ್ಕೆ ಮಾಡುತ್ತಿದೆ’ ಎಂದು ಒಬ್ಬರು ಉತ್ತರಿಸಿದ್ದಾರೆ. ‘ಇಲ್ಲಿ ಅಧಿಕ ಗುಂಡಿಗಳಿದ್ದರೂ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ’ ಎಂದು ಇನ್ನೊಬ್ಬರು ದೂರಿದ್ದರೆ, ‘ಪದೇ ಪದೇ ಅವರನ್ನೇ ಆಯ್ಕೆ ಮಾಡಿ ಎಂದು ವಿನಂತಿ ಮಾಡುತ್ತೇನೆ’ ಎಂದು ಇನ್ನೊಬ್ಬರು ವ್ಯಂಗ್ಯ ಮಾಡಿದ್ದಾರೆ. ಮೂಲಸೌಕರ್ಯಕ್ಕಿಂತ ಉಚಿತ ಯೋಜನೆಗಳು ಮುಖ್ಯ ಎಂದು ಕೆಲವರು ಗ್ಯಾರಂಟಿ ಯೋಜನೆಗಳನ್ನು ಅಣಕಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಟ್ಯಾಗ್‌ ಮಾಡಿ ಅನೇಕರು ಪ್ರಶ್ನೆ ಕೇಳಿದ್ದಾರೆ.

‘ಇಲ್ಲಿನ ನಿವಾಸಿಗಳೇ ನೀವು ಯಾಕೆ ಮೂಲ ಸೌಕರ್ಯ ಇಲ್ಲದ ಈ ಜಾಗವನ್ನು ವಾಸಿಸಲು ಆಯ್ಕೆ ಮಾಡಿಕೊಂಡಿದ್ದೀರಿ’ ಎಂದು ಒಬ್ಬರು ಕೇಳಿದ್ದಾರೆ. ದೇಶದ ಎಲ್ಲ ನಗರಗಳಲ್ಲಿ ಇಂಥ ಸಮಸ್ಯೆಗಳಿವೆ. ಬೆಂಗಳೂರು ಒಂದನ್ನೇ ಹೈಲೈಟ್‌ ಮಾಡಬೇಡಿ ಎಂದು ಬೆಂಗಳೂರು ಪ್ರಿಯರೊಬ್ಬರು ಮನವಿ ಮಾಡಿಕೊಂಡಿದ್ದಾರೆ. 

‘ಪ್ರಶ್ನೆ ಏನೆಂದರೆ ಇಲ್ಲಿ ರಸ್ತೆ ಎಲ್ಲಿದೆ?’, ‘ಶಾಸಕರು, ಸಂಸದರು ಅಗತ್ಯವಾಗಿ ಇಲ್ಲಿ ವಾಸಿಸಬೇಕು’, ‘50 ಟ್ರಿಲಿಯನ್ ಎಕಾನಮಿ’ ಹೀಗೆ ಅನೇಕ ರೀತಿಯ ಪ್ರತಿಕ್ರಿಯೆಗಳು ಬಂದಿವೆ.

ರಸ್ತೆಯಲ್ಲಿ ಡಾಂಬರು ಇರುವುದು ಕೆಸರಿನ ಮಧ್ಯೆ ಅಲ್ಲಲ್ಲಿ ಕಂಡು ಬಂತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.