
‘ಪಾದಚಾರಿ ಮಾರ್ಗದ ಕಾಂಕ್ರೀಟ್ ಕುಸಿತ’
ಅತ್ತಿಗುಪ್ಪೆ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಕಾಂಕ್ರೀಟ್ ಸ್ಲ್ಯಾಬ್ ಕುಸಿದಿದ್ದು ಜನರಿಗೆ ತೊಂದರೆಯಾಗುತ್ತಿದೆ. ಪಾದಚಾರಿ ಮಾರ್ಗ ಹಾಳಾಗಿರುವುದರಿಂದ ಜನರು ಮುಖ್ಯರಸ್ತೆಯಲ್ಲಿ ಓಡಾಡುತ್ತಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಪಾಲಿಕೆಯ ಸಂಬಂಧಪಟ್ಟ ಸಿಬ್ಬಂದಿ ಪಾದಚಾರಿ ಮಾರ್ಗವನ್ನು ಸರಿಪಡಿಸಬೇಕು.
-ದಯಾನಂದ, ಅತ್ತಿಗುಪ್ಪೆ
‘ಕೆಟ್ಟು ನಿಂತಿರುವ ಕಾರು ಸ್ಥಳಾಂತರಿಸಿ’
ಬನ್ನಪ್ಪ ಪಾರ್ಕ್ ರಸ್ತೆಯಲ್ಲಿ ಹಲವು ತಿಂಗಳಿಂದ ಕೆಟ್ಟು ಹೋಗಿರುವ ಕಾರೊಂದು ನಿಂತಿದೆ. ಈ ರಸ್ತೆಯು ಕೆಂಪೇಗೌಡ ಹಾಗೂ ಕಬ್ಬನ್‌ಪೇಟೆ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹಳೆಯ ಕಾರು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವುದರಿಂದ ವಾಹನ ದಟ್ಟಣೆ ಆಗುತ್ತಿದೆ. ಜೊತೆಗೆ ಅಪಘಾತಗಳು ಸಂಭವಿಸುತ್ತಿವೆ. ನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿರುವ ಈ ಕಾರನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಾಂತರಿಸಬೇಕು.
-ಶಿವಪ್ರಸಾದ್ ಎಸ್., ವಾಹನ ಸವಾರ
‘ರಸ್ತೆ ಗುಂಡಿ ಮುಚ್ಚಿ’
ಮಲ್ಲತ್ತಹಳ್ಳಿಯ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಮುದ್ದಿನಪಾಳ್ಯದಿಂದ ಜ್ಞಾನಭಾರತಿ ಆರ್‌ಟಿಒ ರಸ್ತೆ, ಜಯಂತ್ ಕನ್ವೆನ್ಷನ್ ಹಾಲ್ ಮೂಲಕ ವಿದ್ಯಾನಿಕೇತನ್ ಶಾಲೆಗೆ ತಲುಪುವ ರಸ್ತೆ ಗುಂಡಿಮಯವಾಗಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳಾಗಿರುವ ಪರಿಣಾಮ ವಾಹನ ಸಂಚಾರಕ್ಕೆ ಸಂಚಕಾರ ಬಂದಿದೆ. ರಸ್ತೆ ಅಭಿವೃದ್ಧಿಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ಈ ರಸ್ತೆ ದುರಸ್ತಿಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
-ಎಸ್.ಎಂ. ನಾಗರಾಜ್,ಮಲ್ಲತ್ತಹಳ್ಳಿ
ನಗರದ ಹೃದಯ ಭಾಗದಲ್ಲಿರುವ ಜೆ.ಸಿ. ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಿನರ್ವ ವೃತ್ತದಿಂದ ಭಾರತ್ ಜಂಕ್ಷನ್‌ವರೆಗೆ ರಸ್ತೆಯ ಎಡಭಾಗದಲ್ಲಿ ವಾಹನಗಳ ಬಿಡಿ ಭಾಗ ಮಾರಾಟದ ಮಳಿಗೆಗಳಿದ್ದು, ಈ ಮಳಿಗೆಗಳಿಗೆ ಬರುವ ಕಾರುಗಳನ್ನು ರಸ್ತೆ ಹಾಗೂ ಪಾದಚಾರಿ ಮಾರ್ಗದಲ್ಲಿಯೇ ನಿಲ್ಲಿಸಲಾಗುತ್ತಿದೆ.
ಮಳಿಗೆಗಳ ಮಾಲೀಕರು ಗ್ರಾಹಕರನ್ನು ಕರೆತರಲು ತಮ್ಮ ಪ್ರತಿನಿಧಿಗಳನ್ನು ರಸ್ತೆಯುದ್ದಕ್ಕೂ ನಿಲ್ಲಿಸುತ್ತಿದ್ದು, ಅವರು ಮಾರ್ಗ ಮಧ್ಯದವರೆಗೂ ಬಂದು ಕಾರುಗಳನ್ನು ತಡೆಯಲು ಪ್ರಯತ್ನಿಸುತ್ತಾರೆ. ಇದರಿಂದ ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ವಾಹನಗಳ ದಟ್ಟಣೆ ಇದ್ದು, ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಚಾರ ಪೊಲೀಸರು ಈ ಬಗ್ಗೆ ಗಮನಹರಿಸುತ್ತಿಲ್ಲ.
-ಮಂಜುನಾಥ್, ವಾಹನ ಸವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.