‘ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ’
ಕೆಂಗೇರಿ ಸಮೀಪದ ಮೈಲಸಂದ್ರ ಬಿಡಿಎ ಅಪಾರ್ಟ್‌ಮೆಂಟ್‌ನ ಬೆಸ್ಕಾಂ ಕಚೇರಿಯ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ ಬಿದ್ದಿದೆ. ಪ್ಲಾಸ್ಟಿಕ್ ಚೀಲಗಳು, ಹಳೆಯ ಬಟ್ಟೆಗಳನ್ನು ಇಲ್ಲಿ ಸುರಿಯಲಾಗಿದೆ. ಇದರಿಂದ ಇಡೀ ಪ್ರದೇಶವೇ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಬಂದು ಇಲ್ಲಿ ಎಸೆದು ಹೋಗುತ್ತಿದ್ದಾರೆ. ಪಾಲಿಕೆ ಸಿಬ್ಬಂದಿ ಈ ತ್ಯಾಜ್ಯದ ರಾಶಿಯನ್ನು ವಿಲೇವಾರಿ ಮಾಡುತ್ತಿಲ್ಲ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಪ್ರಿಯಾಂಕಾ, ಮೈಲಸಂದ್ರ ಕೆಂಗೇರಿ
ಸಂಜಯನಗರದ ಡಾ. ರಾಜಗೋಪಾಲ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಸಂಚಾರ ದಟ್ಟಣೆ ಆಗುತ್ತಿದೆ. ಜೊತೆಗೆ ಗುಂಡಿಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು, ಕೈ ಕಾಲು ಮುರಿದುಕೊಂಡಿರುವ ಘಟನೆಗಳೂ ನಡೆದಿವೆ. ರಸ್ತೆ ಗುಂಡಿ ಮುಚ್ಚುವಂತೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ರಸ್ತೆ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
ಪವನ್ ಎಸ್., ಸಂಜಯನಗರ
ಇಸ್ರೊ ಬಡಾವಣೆಯ ವಿಠ್ಠಲ ವ್ಯಾಲಿಯ ಮೂರನೇ ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಹೋಗಿದ್ದು, ವಾಹನ ಸಂಚಾರವೇ ದುಸ್ತರವಾಗಿದೆ. ಈ ರಸ್ತೆಗೆ ಹಾಕಿದ ಡಾಂಬರು ಕಿತ್ತು ಹೋಗಿ ವರ್ಷಗಳೇ ಕಳೆದಿದೆ. ಮಳೆ ಬಂದರೆ ರಸ್ತೆಯು ಕೆಸರು ಗದ್ದೆ ಆಗುತ್ತಿದೆ. ಮಹಿಳೆಯರು, ವೃದ್ಧರು ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಮುಕುಂದ, ವಿಠ್ಠಲ ವ್ಯಾಲಿ
ಹೆಣ್ಣೂರು ಬಾಗಲೂರು ಮುಖ್ಯ ರಸ್ತೆಯ ವಡ್ಡರಪಾಳ್ಯ ಜಂಕ್ಷನ್‌ನಲ್ಲಿ ತ್ಯಾಜ್ಯ ನೀರು ಹರಿಯುತ್ತಿದೆ. ಇದರಿಂದ ಸ್ಥಳೀಯ ನಾಗರಿಕರಿಗೆ ಹಾಗೂ ವ್ಯಾಪಾರಿಗಳಿಗೆ ಸಮಸ್ಯೆ ಆಗಿದೆ. ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯ ರಸ್ತೆಯಲ್ಲಿಯೇ ತ್ಯಾಜ್ಯ ನೀರು ಹರಿಯುವುದರಿಂದ ವಾಹನ ಸಂಚಾರಕ್ಕೂ ತೊಂದರೆ ಆಗಿದ್ದು, ಸಂಚಾರ ದಟ್ಟಣೆ ಆಗುತ್ತಿದೆ. ಇದನ್ನು ಸರಿಪಡಿಸುವಂತೆ ಬೆಂಗಳೂರು ಜಲಮಂಡಳಿ ಹಾಗೂ ಪಾಲಿಕೆಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ.
ವಡ್ಡರಪಾಳ್ಯದ ನಿವಾಸಿಗಳು
ಹೆಬ್ಬಾಳದ ಗುಂಡಪ್ಪ ರೆಡ್ಡಿ ಬಡಾವಣೆಯ ಒಂದನೇ ಕ್ರಾಸ್‌ನ ಪಾದಚಾರಿ ಮಾರ್ಗದ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಪಾಲಿಕೆ ಸಿಬ್ಬಂದಿ ಸರಿಪಡಿಸಿದ್ದಾರೆ.
‘ಪ್ರಜಾವಾಣಿ’ಯ ಕುಂದು ಕೊರತೆ ವಿಭಾಗದಲ್ಲಿ ಅಕ್ಟೋಬರ್ 13ರಂದು ‘ಪಾದಚಾರಿ ಮಾರ್ಗದ ಕಾಂಕ್ರೀಟ್ ಸ್ಲ್ಯಾಬ್ ಕುಸಿತ’ ಶೀರ್ಷಿಕೆ ಅಡಿಯಲ್ಲಿ ಅಹವಾಲು ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ ಸಿಬ್ಬಂದಿ ಪಾದಚಾರಿ ಮಾರ್ಗವನ್ನು ಸರಿಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.