ADVERTISEMENT

ಬೆಂಗಳೂರು ರಸ್ತೆಗಳಿಗೆ ಡಾಂಬರ್‌ ಹಾಕಲು ₹5,000 ಕೋಟಿ ಎಲ್ಲಿದೆ: ಅಶೋಕ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 15:39 IST
Last Updated 27 ಅಕ್ಟೋಬರ್ 2025, 15:39 IST
ಆರ್. ಅಶೋಕ 
ಆರ್. ಅಶೋಕ    

ಬೆಂಗಳೂರು: ನಗರದ ರಸ್ತೆಗಳಿಗೆ ಒಂದು ಪದರ ಡಾಂಬರ್‌ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅದಕ್ಕೆ ಸುಮಾರು ₹5 ಸಾವಿರ ಕೋಟಿ ಬೇಕಾಗುತ್ತದೆ. ಆ ಹಣ ಎಲ್ಲಿಂದ ತರುತ್ತಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ರಸ್ತೆ ಗುಂಡಿಗಳಿಂದ 12 ಜನರು ಮೃತಪಟ್ಟಿದ್ದಾರೆ. ಉಪಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್‌ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ನಗರ ಪ್ರದಕ್ಷಿಣೆ ಮಾಡಿದರೆ ರಸ್ತೆಗುಂಡಿ ಕಾಣುತ್ತವೆಯೇ? ತೆರಿಗೆ ಪಾವತಿಸುವುದಿಲ್ಲ, ರಸ್ತೆ ಗುಂಡಿ ತಾವೇ ಮುಚ್ಚುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ಒಟ್ಟು ರಸ್ತೆ ಗುಂಡಿಗಳನ್ನು ಲೆಕ್ಕಹಾಕಿದರೆ ಗಿನ್ನಿಸ್‌ ದಾಖಲೆಗೆ ಕಳುಹಿಸಬಹುದು’ ಎಂದರು.

‘ನಗರದ ಶ್ವಾಸಕೋಶದಂತಿರುವ ಲಾಲ್‌ಬಾಗ್‌ನಲ್ಲಿ ಸುರಂಗ ರಸ್ತೆ ನಿರ್ಮಿಸಲಾಗುತ್ತದೆ. ನಗರಕ್ಕೆ ಹಸಿರು ನೀಡುವ ಇಂತಹ ಉದ್ಯಾನದಲ್ಲಿ ಸುರಂಗ ಕೊರೆಯಬಾರದು. ಈ ಯೋಜನೆಯಿಂದ ಅಂತರ್ಜಲಕ್ಕೆ ಧಕ್ಕೆಯಾಗುತ್ತದೆ. ಕೆಂಪೇಗೌಡ ಗೋಪುರ ಲಾಲ್‌ಬಾಗ್‌ನಲ್ಲಿದ್ದು, ಅದನ್ನೂ ಸರ್ಕಾರ ಒಡೆದುಹಾಕಬಹುದು. ವಿಜ್ಞಾನಿಗಳು, ಪರಿಸರವಾದಿಗಳ ಸಲಹೆಯನ್ನೂ ಸರ್ಕಾರ ಪರಿಗಣಿಸಬೇಕು. ಎಷ್ಟೇ ಅನುದಾನ ಹೆಚ್ಚಳ ಮಾಡಿದರೂ ಯೋಜನೆ ಜಾರಿ ಸಾಧ್ಯವಿಲ್ಲ. ಮೆಟ್ರೊ ಯೋಜನೆಯನ್ನು ಇಷ್ಟೇ ಹಣದಲ್ಲಿ ವಿಸ್ತರಣೆ ಮಾಡಬಹುದು. ಈ ಯೋಜನೆ ಮಾಡಿ ಡಿ.ಕೆ.ಶಿವಕುಮಾರ್‌ ಖಳನಾಗುವುದು ಬೇಡ. ಈ ಕುರಿತು ಬಿಜೆಪಿ ಶಾಸಕರೊಂದಿಗೆ ಹೋರಾಟ ನಡೆಸಲಾಗುವುದು’ ಎಂದರು.

ADVERTISEMENT

2025-26ನೇ ಆರ್ಥಿಕ ಸಾಲಿನಲ್ಲಿ ಶೇ 30ರಷ್ಟು ಅನುದಾನ ಬಳಕೆಯಾಗಿದೆ. ಎಲ್ಲ ಇಲಾಖೆಗಳಲ್ಲಿ ಅನುದಾನ ಬಳಕೆಯೇ ಆಗಿಲ್ಲ. ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡುವ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಇಲಾಖೆಗಳ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಈಗಾಗಲೇ ನಿವೇಶನ ಪಡೆದವರಿಗೆ ‘ಎ’ ಖಾತಾಗೆ ವರ್ಗಾವಣೆ ಮಾಡಿಸಲು ಹಣ ಪಾವತಿಸಬೇಕು. ಇದನ್ನು ಕ್ರಾಂತಿ ಎನ್ನುತ್ತಿದ್ದಾರೆ. ಜನರು ಎಚ್ಚರಿಕೆಯಿಂದ ಇರಬೇಕು. ಇದು ಹಣ ವಸೂಲಿ ಮಾಡುವ ಯೋಜನೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.