ADVERTISEMENT

ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಉಪನ್ಯಾಸಕರ ಮನೆಗೆ ನುಗ್ಗಿ ₹1.50 ಕೋಟಿ ದರೋಡೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 16:30 IST
Last Updated 22 ಸೆಪ್ಟೆಂಬರ್ 2025, 16:30 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಉಪನ್ಯಾಸಕರೊಬ್ಬರ ಮನೆಗೆ ನುಗ್ಗಿ ₹1.50 ಕೋಟಿ ನಗದು ಹಾಗೂ 50 ಗ್ರಾಂ ಆಭರಣ ದರೋಡೆ ನಡೆಸಲಾಗಿದ್ದು, ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪನ್ಯಾಸಕ ಗಿರಿರಾಜು ಅವರ ಮನೆಯಲ್ಲಿ ದರೋಡೆ ನಡೆದಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಕಾರಿನಲ್ಲಿ ಬಂದಿದ್ದ ದರೋಡೆಕೋರರು, ಉಪನ್ಯಾಸಕರ ಮನೆಗೆ ನುಗ್ಗಿದ್ದರು. ಬಿಳಿ ಬಣ್ಣದ ಶರ್ಟ್ ಧರಿಸಿದ್ದ ಆರೋಪಿಗಳು, ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

‘ಮನೆಯಲ್ಲಿದ್ದವರ ಮೊಬೈಲ್‌ ಕಸಿದುಕೊಂಡಿದ್ದ ದರೋಡೆಕೋರರು, ಎಲ್ಲರನ್ನೂ ಪ್ರತ್ಯೇಕ ಕೋಣೆಯಲ್ಲಿ ಕೂಡಿ ಹಾಕಿದ್ದರು. ಬಳಿಕ ಇಡೀ ಮನೆಯಲ್ಲಿ ಶೋಧ ನಡೆಸಿದ್ದರು. ಬ್ಯಾಗ್‌ವೊಂದರಲ್ಲಿ ₹1.50 ಕೋಟಿ ನಗದು ಇತ್ತು. ಅದನ್ನು ದರೋಡೆ ಮಾಡಿಕೊಂಡು ಪರಾರಿ ಆಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗಿರಿರಾಜು ಅವರು ಜಮೀನು ಖರೀದಿಗೆಂದು ಮನೆಯಲ್ಲಿ ನಗದು ಇಟ್ಟುಕೊಂಡಿದ್ದರು‌ ಎಂದು ಹೇಳಲಾಗಿದೆ.

‘ದರೋಡೆಕೋರರು ಬಂದಿರುವ ಮಾರ್ಗದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ. ಬಂದ ಕಾರಿನಲ್ಲೇ ಆರೋಪಿಗಳು ವಾಪಸ್‌ ಪರಾರಿ ಆಗಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.