ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿಶೀಟರ್ ಜನ್ಮದಿನ ಆಚರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಬಿ.ದಯಾನಂದ ಅವರು ಆಂತರಿಕ ತನಿಖೆಗೆ ಆದೇಶ ನೀಡಿದ್ದಾರೆ.
ಸರ್ಜಾಪುರದ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಜೈಲಿನಲ್ಲಿ ತನ್ನ ಸಹಚರರ ಜತೆ ಹುಟ್ಟಹಬ್ಬ ಆಚರಿಸಿಕೊಂಡಿರುವ ವಿಡಿಯೊ ಮತ್ತು ಫೋಟೊಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ದಯಾನಂದ್, ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡಿರುವುದು ಮತ್ತು ವಿಡಿಯೊ ಪೋಸ್ಟ್ ಮಾಡಿರುವ ಬಗ್ಗೆ ಆಂತರಿಕ ತನಿಖೆ ನಡೆಸಿ, ವರದಿ ನೀಡುವಂತೆ ಡಿಐಜಿ ದಿವ್ಯಶ್ರೀ ಅವರಿಗೆ ಸೂಚಿಸಿದ್ದಾರೆ.
ಜನವರಿಯಲ್ಲಿ ಸರ್ಜಾಪುರದ ರೌಡಿ ವೆಂಕಟೇಶ್ ಅನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶ್ರೀನಿವಾಸ್ ಹಾಗೂ ಸಹಚರರು ಜೈಲು ಸೇರಿದ್ದಾರೆ. ಶ್ರೀನಿವಾಸ್‌ಗೆ ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅವಕಾಶ ನೀಡಿದ್ದು, ಈ ವಿಡಿಯೊವನ್ನು ಸಾಗರ್ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಕೊಲೆಯಾದ ವೆಂಕಟೇಶ್ ಅವರ ಪತ್ನಿ ಎಡಿಜಿಪಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.