ADVERTISEMENT

ಬೆಂಗಳೂರು: ತಾಯಿ ಎದುರೇ ರೌಡಿಶೀಟರ್‌ ಕೊಲೆ!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 15:52 IST
Last Updated 26 ಫೆಬ್ರುವರಿ 2026, 15:52 IST
ಪವನ್
ಪವನ್   

ಬೆಂಗಳೂರು: ಥಣಿಸಂದ್ರದ ಅಮರಜ್ಯೋತಿ ಲೇಔಟ್‌ನಲ್ಲಿ ರೌಡಿಶೀಟರ್​ ಒಬ್ಬನನ್ನು ತಾಯಿಯ ಎದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪವನ್ ಕುಮಾರ್‌ (28) ಕೊಲೆಯಾದ ವ್ಯಕ್ತಿ.

ಮೂರು ವರ್ಷಗಳ ಹಿಂದೆ ನಡೆದಿದ್ದ ರೌಡಿಶೀಟರ್ ಕಪಿಲ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪವನ್, ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ರಾತ್ರಿ ಬೇಕರಿ ಬಂದ್ ಮಾಡಿ ಮನೆಗೆ ಬರುವಾಗ ಮೂರು ಬೈಕ್‌ಗಳಲ್ಲಿ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ. ಪವನ್ ಮನೆಯ ಮುಂದೆ ವಾಹನ ನಿಲ್ಲಿಸುತ್ತಿದ್ದಂತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ  ಮಾಡಿ ಪರಾರಿಯಾಗಿದ್ದಾರೆ. ಪವನ್ ವಿರುದ್ದವೂ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದಿದ್ದ ಐದು ಮಂದಿ ಕೃತ್ಯವೆಸಗಿ ಪರಾರಿಯಾಗಿರುವ ಬಗ್ಗೆ ಮಾಹಿತಿ ಇದೆ. ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ. ಆರೋಪಿಗಳ ಬಗ್ಗೆ ಸುಳಿವು ದೊರೆತಿದ್ದು, ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ತಿಳಿಸಿದರು.

ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

‘ಕಣ್ಣ ಮುಂದೆಯೇ ಕೊಲೆ ಮಾಡಿದ್ರು...’: ‘ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಗ ಎಂಟು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ. ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಯಾರ ಸಹವಾಸಕ್ಕೂ ಹೋಗುತ್ತಿರಲಿಲ್ಲ. ರಾತ್ರಿ ಬೇಕರಿ ಬಾಗಿಲು ಹಾಕಿ  ಮನೆಗೆ ಬರುತ್ತಿರುವುದಾಗಿ ಫೋನ್ ಮಾಡಿ ಹೇಳಿದ್ದ. ಮನೆಯ ಗೇಟ್‌ ಬಳಿ ಬೈಕ್‌ ನಿಲ್ಲಿಸುತ್ತಿದ್ದಾಗ, ನನ್ನ ಕಣ್ಣ ಮುಂದೆಯೇ ಮಗನನ್ನು ಹೊಡೆದು ಹಾಕಿದ್ರು, ನನಗೆ ಕಾಪಾಡಲು ಆಗಲಿಲ್ಲ. ಹಳೆಯ ದ್ವೇಷ ಇಟ್ಟುಕೊಂಡು ಈ ಕೃತ್ಯವೆಸಗಿದ್ದಾರೆ. ಪ್ರೇಮ್​ ಎಂಬಾತ ದಾಳಿ ಮಾಡಿಸಲು ಸಂಚು ಮಾಡಿಸುತ್ತಿದ್ದಾನೆ ಎಂದು ಮಗ ಹೇಳುತ್ತಿದ್ದ. ಅದಕ್ಕಾಗಿ ಕೆಲ ತಿಂಗಳು ಬೇರೆ ಊರಲ್ಲಿ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದೆ. ಇತ್ತೀಚೆಗಷ್ಟೇ ಕರೆದುಕೊಂಡು ಬಂದಿದ್ದೆ’ ಎಂದು ಕೊಲೆಯಾದ ಪವನ್ ಕುಮಾರ್ ತಾಯಿ ಕೋಮಲಾ ಮಾಧ್ಯಮಗಳಿಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.