ಬೆಂಗಳೂರು: ಹೊರ ರಾಜ್ಯಗಳ ವಾಹನಗಳನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಅಕ್ರಮವಾಗಿ ತಡೆದು ₹2,500 ವಸೂಲಿ ಮಾಡಿದ್ದ ಆರೋಪದಡಿ ಹಲಸೂರು ಗೇಟ್ ಸಂಚಾರ ಠಾಣೆ ಎಎಸ್‌ಐ ಡಿ.ಸಿ. ಮಹೇಶ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಗಂಗಾಧರಪ್ಪ ಅವರನ್ನು ಅಮಾನತು ಮಾಡಲಾಗಿದೆ.
ನಗರದ ದೇವಾಂಗ ವೃತ್ತದಲ್ಲಿ ಜೂನ್ 10ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಹಾಗೂ ಹೆಡ್ ಕಾನ್‌ಸ್ಟೆಬಲ್ ವಾಹನ ತಡೆದು ಹಣ ವಸೂಲಿ ಮಾಡಿದ್ದರು. ಈ ಬಗ್ಗೆ ವಾಹನದ ಮಾಲೀಕರು, ಇ–ಮೇಲ್ ಮೂಲಕ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರಿಗೆ ದೂರು ನೀಡಿದ್ದರು.
ದೂರಿನ ಪರಿಶೀಲನೆ ನಡೆಸಿದ ರವಿಕಾಂತೇಗೌಡ, ಎಎಸ್‌ಐ ಹಾಗೂ ಹೆಡ್ ಕಾನ್‌ಸ್ಟೆಬಲ್ ಅಮಾನತು ಮಾಡಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ದಂಡ ಸಂಗ್ರಹ ಪ್ರಕ್ರಿಯೆ ಪಾರದರ್ಶಕವಾಗಿರಬೇಕೆಂಬ ಕಾರಣಕ್ಕೆ ಪ್ರತಿಯೊಬ್ಬ ಸಿಬ್ಬಂದಿಗೂ ಬಾಡಿವೋರ್ನ್ ಕ್ಯಾಮೆರಾ ನೀಡಲಾಗಿದೆ. ಆದರೆ, ಎಎಸ್‌ಐ ಮಹೇಶ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಗಂಗಾಧರಪ್ಪ, ಬಾಡಿವೋರ್ನ್ ಕ್ಯಾಮೆರಾ ಧರಿಸದೇ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವುದಾಗಿ ರವಿಕಾಂತೇಗೌಡ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.